ಯುಪಿಸಿಎಲ್ ನಿಂದ ಪರಿಸರ ಹಾನಿ: ಕೇಂದ್ರೀಯ ತಂಡ ಅಧ್ಯಯನ, ಕೃಷಿಕರು, ಗ್ರಾಮಸ್ಥರಿಂದ ಮಾಹಿತಿ

ಪಡುಬಿದ್ರಿ: ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದ ಯೋಜನೆಯಿಂದ ಹಾನಿಗೊಳಗಾದ ಪರಿಸರಕ್ಕೆ ಕೇಂದ್ರೀಯ ಪರಿಸರ ತಜ್ಞರ ತಂಡವು ಭೇಟಿ ನೀಡಿ ಮಂಗಳವಾರ ಪರಿಶೀಲನೆ ನಡೆಸಿತು.

ಕೇಂದ್ರೀಯ ಹಸಿರು ಪೀಠಕ್ಕೆ ತಜ್ಞರ ಸಮಿತಿಯು ಮುಂದಿನ ಜನವರಿ 31ರೊಳಗೆ ವರದಿ ನೀಡಬೇಕಾಗಿದೆ. ಈ ದಿನಾಂಕವು ಮುಂದೂಡಬಹುದು ಎಂದು ಸಮಿತಿಯ ಡಾ. ಕೃಷ್ಣರಾಜ್‌ ತಿಳಿಸಿದರು. ನಂದಿಕೂರು ಜನಜಾಗೃತಿ ಸಮಿತಿಯು ರಾಷ್ಟ್ರೀಯ ಹಸಿರು ಪೀಠದ ಮುಂದೆ 2018ರಲ್ಲಿ ದಾಖಲಿಸಿರುವ ದೂರಿನ್ವಯ ಯೋಜನೆಯಿಂದಾಗಿ ಉಂಟಾಗಿರುವ ಪರಿಸರ ಹಾನಿಗಳ ಬಗ್ಗೆ ಪರಿಶೀಲಿಸಲು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಯ ತಂಡ ಎಲ್ಲೂರು ಗ್ರಾಮದ ಉಳ್ಳೂರು, ಕೊಳಚೂರು, ಮುದರಂಗಡಿಗಳಲ್ಲಿ  ಕೃಷಿಗೆ ಹಾಗೂ ಗ್ರಾಮಸ್ಥರಿಗೆ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿ ದಾಖಲಿಸಿಕೊಂಡರು. ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದರು.

ಎಲ್ಲೂರು ಗ್ರಾಮದ ಜಯಂತ್ ರಾವ್, ಗಣೇಶ್ ರಾವ್‌ ಅವರ ಮನೆ, ಪರಿಸರ, ಅಲ್ಲಿನ ಅಂತರ್ಜಲ ಮತ್ತು ಉಪ್ಪು ನೀರಿನ ಸಮಸ್ಯೆ, ಕುಂಠಿತವಾಗಿರುವ ಕೃಷಿ ಹಾಗೂ ತೋಟ ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆಗಳನ್ನು ತಂಡವು ಪರಿಶೀಲಿಸಿತು. ಗಣೇಶ್ ರಾವ್ ಅವರು, ‘ ಯೋಜನೆಯಿಂದ ಕೃಷಿ, ಮನುಷ್ಯರಿಗೆ ಮಾತ್ರವಲ್ಲದೆ ಸಾಕುಪ್ರಾಣಿಗಳ ಮೇಲೂ ಪರಿಣಾಮ ಬೀರಿದೆ. ಜಾನುವಾರುಗಳಿಗೆ ಚರ್ಮ ರೋಗ ಕಾಣಿಸಿಕೊಂಡಿದೆ. 3ವರ್ಷಗಳಲ್ಲಿ 10  ಜಾನುವಾರು ಸತ್ತಿವೆ’ ಎಂದು ಹೇಳಿದರು. ಎಲ್ಲೂರು ಭಂಡಾರಮನೆ ಮಾಧವ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ಯೋಜನೆಯಿಂದ ಸುಮಾರು 10 ಕಿ.ಮೀ. ವ್ಯಾಪ್ತಿಯ ಪರಿಸರಕ್ಕೆ ಹಾನಿಗಳಾಗಿವೆ’ ಎಂದು ಸಮಿತಿಗೆ ತಿಳಿಸಿದರು.

ಬೆಂಗಳೂರು ಕಚೇರಿಯ ಜಂಟಿ ನಿರ್ದೇಶಕ ತಿರುಮೂರ್ತಿ, ಬೆಂಗಳೂರಿನ  ಡಾ. ಶ್ರೀಕಾಂತ್ ಹಾಗೂ ಐಎಸ್‌ಇಸಿ ಬೆಂಗಳೂರಿನ ಡಾ. ಕೃಷ್ಣರಾಜ್  ತಂಡದಲ್ಲಿದ್ದರು.  ಕೃಷಿ ಇಲಾಖಾ ಜಂಟಿ ನಿರ್ದೇಶಕ ಕೆಂಪೇಗೌಡ, ಉಪ ನಿರ್ದೇಶಕ ಚಂದ್ರಶೇಖರ ನಾಯಕ್, ಸಹಾಯಕ ಕೃಷಿ ನಿರ್ದೇಶಕ ಮೋಹನ್‌ರಾಜ್, ಸಹಾಯಕ ಕೃಷಿ ಅಧಿಕಾರಿಗಳಾದ ವಾದಿರಾಜ ರಾವ್, ಶೇಖರ್, ಉಪ ತೋಟಗಾರಿಕಾ ನಿರ್ದೇಶಕಿ ಭುವನೇಶ್ವರಿ, ಉಡುಪಿ ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಚೇರಿಯ ಡಾ. ದಿವ್ಯಾ, ಮಂಗಳೂರು ಪರಿಸರ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ರಮೇಶ್, ಮುದರಂಗಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಸುಬ್ರಹ್ಮಣ್ಯ ಪ್ರಭು, ಸ್ಥಳೀಯರಾದ ಮಾಧವ ಶೆಟ್ಟಿ, ಹರೀಶ್ ಶೆಟ್ಟಿ, ಜಗನ್ನಾಥ ಮೂಲ್ಯ, ಜಯಂತ್ ರಾವ್, ನಾಗೇಶ್ ರಾವ್, ಗಣೇಶ್ ರಾವ್, ಸುಬ್ರಹ್ಮಣ್ಯ ರಾವ್ ಇದ್ದರು.

ಹಾನಿ ಆದವರಿಗೆ ಪರಿಹಾರ ಧನ ನಿಗದಿಪಡಿಸಲು ಈ ತಂಡವು ರೈತರ ಭೂಮಿಗಳಿಗೆ ತೆರಳುತ್ತಿದೆ. ಮಾಹಿತಿ ಸಂಗ್ರಹಿಸಿದೆ. ಪರಿಸರ, ಆರೋಗ್ಯ, ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳಿಂದ ವರದಿಯನ್ನು ತರಿಸಿಕೊಳ್ಳುತ್ತಿದ್ದೇವೆ ಎಂದು ಸಮಿತಿಯ ಡಾ. ಕೃಷ್ಣರಾಜ್ ಹೇಳಿದರು.

ಪರಿಸರ ಕಾನೂನು ಉಲ್ಲಂಘನೆಗಾಗಿ ಸುಮಾರು ₹5 ಕೋಟಿ ಪರಿಹಾರವನ್ನು ಕೇಂದ್ರೀಯ ಪರಿಸರ ನಿಯಂತ್ರಣ ಮಂಡಳಿಗೆ ಯುಪಿಸಿಎಲ್ ದಂಡ ಪಾವತಿಸಿದೆ. ಸುಮಾರು ₹177.8 ಕೋಟಿ ನಷ್ಟ ಪಾವತಿಗಾಗಿ ನಂದಿಕೂರು ಜನಜಾಗೃತಿ ಸಮಿತಿಯ ದಾವೆಯಲ್ಲಿ ಅಂತಿಮ ಆದೇಶವೂ ನಂದಿಕೂರು ಜನ ಜಾಗೃತಿ ಸಮಿತಿ ಪರವಾಗಿಯೇ ಬಂದಿದೆ. ಅದಕ್ಕಾಗಿ ಈ ಸಮಿತಿಯು ಪರಿಶೀಲಿಸಿ ವರದಿಯನ್ನು ನೀಡಲಿದೆ ಎಂದು ತಜ್ಞರ ಸಮಿತಿ ಸದಸ್ಯ ಡಾ. ಕೃಷ್ಣರಾಜ್ ತಿಳಿಸಿದರು. 

Leave a Reply

Your email address will not be published. Required fields are marked *

error: Content is protected !!