ನನ್ನ-ಡಿಕೆಶಿ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ-ಗೊಂದಲ ಇಲ್ಲ, ಮುಂದೆಯೂ ಇರಲ್ಲ- ಸಿಎಂ ಸಿದ್ದರಾಮಯ್ಯ
ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ ಇಂದಿನ ಬ್ರೇಕ್ ಫಾಸ್ಟ್ ಮೀಟಿಂಗ್ ನಂತರ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಯಲ್ಲಿ ಸಿಎಂ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ಜಂಟಿಯಾಗಿ ಸುದ್ದಿಗೋಷ್ಠಿ ನಡೆಸಿದರು.
ಜಂಟಿ ಸುದ್ದಿಗೋಷ್ಠಿಯಲ್ಲಿ ಆರಂಭದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬ್ರೇಕ್ ಫಾಸ್ಟ್ ಚೆನ್ನಾಗಿತ್ತು, ನಾನು ಡಿ ಕೆ ಶಿವಕುಮಾರ್, ಪೊನ್ನಣ್ಣ ಒಟ್ಟಿಗೆ ಬ್ರೇಕ್ ಫಾಸ್ಟ್ ಮಾಡಿದ್ವಿ. ಮೊನ್ನೆನೇ ಹೈಕಮಾಂಡ್ ಫೋನ್ ಮಾಡಿದ್ದರು. ಡಿ ಕೆ ಶಿವಕುಮಾರ್ ಇವತ್ತು ನಮ್ಮನೆಗೆ ಬಂದರು. ನಮ್ಮ ಮನೆಗೆ ಊಟಕ್ಕೆ ಬನ್ನಿ ಎಂದು ಕರೆದಿದ್ದೆ. ಅವರು ಬ್ರೇಕ್ ಫಾಸ್ಟ್ ಗೆ ಬಂದರು. ಅನಗತ್ಯವಾಗಿ ಕೆಲವು ಗೊಂದಲ ನಿರ್ಮಾಣವಾಯಿತು, ಅದನ್ನು ಬಗೆಹರಿಸಲು ಇಂದು ಸೇರಿ ನಿಮ್ಮ ಮುಂದೆ ಕುಳಿತಿದ್ದೇವೆ ಎಂದರು.
ಭಿನ್ನಾಭಿಪ್ರಾಯವೇ ಇಲ್ಲ, ಮುಂದೆಯೂ ಇರಲ್ಲ, ಒಗ್ಗಟ್ಟು ಸಾರಿದ ಸಿಎಂ
ನಮ್ಮಿಬ್ಬರ ನಡುವೆ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ, ಮುಂದೆಯೂ ಅದು ಬರಲ್ಲ, ನಮಗೆ ಕರೆ ಮಾಡಿದ್ದ ಹೈಕಮಾಂಡ್ ನಾಯಕರು, ಗೊಂದಲ ತಿಳಿ ಮಾಡುವ ಕೆಲಸ ಮಾಡಿ ಎಂದು ಸೂಚನೆ ನೀಡಿದ್ದರು. ಅದರಂತೆ ನಡೆದುಕೊಳ್ಳುತ್ತೇವೆ. ಹೈಕಮಾಂಡ್ ಸೂಚನೆಯಂತೆ ನಾವಿಬ್ಬರೂ ನಡೆದುಕೊಳ್ಳುತ್ತೇವೆ ಎಂದು ಈ ಹಿಂದೆಯೂ ಸ್ಪಷ್ಟಪಡಿಸಿದ್ದೆ. ಹೀಗಾಗಿ ನಮ್ಮ ನಡುವೆ ನಾಳೆಯಿಂದ ಯಾವುದೇ ಗೊಂದಲ ಇರಲ್ಲ. ಈಗಲೂ ಕೂಡ ಯಾವುದೇ ಗೊಂದಲ ಇಲ್ಲ. ಹಿಂದೆಯೂ ಇರಲಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಶಾಸಕರು ದೆಹಲಿಗೆ ಹೋಗಿದ್ದೇಕೆ?
ನಾಯಕತ್ವ ಬದಲಾವಣೆಯ ಬಗ್ಗೆ ಹಲವು ದಿನಗಳಿಂದ ಇದ್ದ ಅನಿಶ್ಚಿತತೆ, ಗೊಂದಲಗಳಿಗೆ ಉಭಯ ನಾಯಕರು ಒಗ್ಗಟ್ಟಿನ ಮಂತ್ರ ಜಪಿಸುವ ಪ್ರಯತ್ನ ಮಾಡಿದ್ದಾರೆ.
ಕಾಂಗ್ರೆಸ್‌ನೊಳಗಿನ ಬಿರುಕು ಮೂಡಿದೆ, ಎರಡು ಬಣ ಇದೆ ಎಂಬ ಮಾತನ್ನು ಸಿದ್ದರಾಮಯ್ಯ ಅಲ್ಲಗಳೆದರು. ಸರ್ಕಾರ ಅಥವಾ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ನನಗೆ ತಿಳಿದಿರುವಂತೆ, ಕೆಲವು ಶಾಸಕರು ಸಚಿವರಾಗಲು ಬಯಸುತ್ತಾರೆ, ಆದ್ದರಿಂದ ಅವರು ಹೈಕಮಾಂಡ್ ಅನ್ನು ಭೇಟಿ ಮಾಡಲು ದೆಹಲಿಗೆ ಹೋಗಿರಬಹುದು. ಅವರು ನಾಯಕತ್ವದ ವಿರುದ್ಧ ಇದ್ದಾರೆ ಎಂದರ್ಥವಲ್ಲ, ಹಲವಾರು ಶಾಸಕರು ದೆಹಲಿಗೆ ಏಕೆ ಪ್ರಯಾಣ ಬೆಳೆಸಿದರು ಎಂಬುದನ್ನು ಈಗಾಗಲೇ ಮಾಧ್ಯಮಗಳ ಮುಂದೆ ವಿವರಿಸಿದ್ದಾರೆ ಎಂದರು.
ಹೈಕಮಾಂಡ್ ಮಾತಿಗೆ ಬದ್ಧ
ಎಲ್ಲಾ ವಿಷಯಗಳಲ್ಲಿಯೂ ನಾನು ಮತ್ತು ಶಿವಕುಮಾರ್ ಇಬ್ಬರೂ ಪಕ್ಷದ ಕೇಂದ್ರ ನಾಯಕತ್ವಕ್ಕೆ ಬದ್ಧರಾಗಿದ್ದೇವೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಏನು ಹೇಳುತ್ತದೆಯೋ, ನಾವು ಅದರಂತೆ ನಡೆಯುತ್ತೇವೆ. ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ನಾವು ಅನುಸರಿಸುತ್ತೇವೆ ಎಂದು ನಿರ್ಧರಿಸಿದ್ದೇವೆ. ನಾಳೆಯಿಂದ ಯಾವುದೇ ಗೊಂದಲ ಇರುವುದಿಲ್ಲ, ಕೆಲವು ಮಾಧ್ಯಮ ವರದಿಗಾರರು ಗೊಂದಲವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿದರು.
ಬಿಜೆಪಿ, ಜೆಡಿಎಸ್ ನವರಿಗೆ ಸುಳ್ಳು ಹೇಳೋದೆ ಕೆಲಸ
ವಿರೋಧ ಪಕ್ಷದ ವಿರುದ್ಧ ಗುರಿಯಿಟ್ಟು ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ನವರು ಸುಳ್ಳು ಆರೋಪಗಳನ್ನು ಹಬ್ಬಿಸುತ್ತಾರೆ. ಅವಿಶ್ವಾಸ ನಿರ್ಣಯ ಮಂಡಿಸುವ ಬಗ್ಗೆ ಖಾಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿಯವರು ಕೇವಲ 60 ಮತ್ತು ಜೆಡಿಎಸ್ 18 ಶಾಸಕರನ್ನು ಹೊಂದಿದ್ದಾರೆ. ಅವರು ನಮ್ಮ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ. ನಾವು 140 ಶಾಸಕ ಬಲ ಹೊಂದಿದ್ದೇವೆ. ಅವರದ್ದು ವ್ಯರ್ಥ ಪ್ರಯತ್ನ. ನಾವು ಅವರ ಸುಳ್ಳು ಆರೋಪಗಳನ್ನು ಎದುರಿಸುತ್ತೇವೆ ಎಂದರು.





