ಭಾರತ್ ಬಂದ್ ಬೆಂಬಲಿಸುವಂತೆ ದೇಶದ ಜನತೆಗೆ ರೈತರ ಕರೆ
ನವದೆಹಲಿ: ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ಸಾವಿರಾರು ರೈತರು ಕಳೆದ 11 ದಿನಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉಗ್ರ ಹೋರಾಟ ನಡೆಸುತ್ತಿದ್ದು, ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಮಂಗಳವಾರ ಭಾರತ್ ಬಂದ್ ಗೆ ಕರೆ ನೀಡಿದ್ದು, ಈ ಬಂದ್ ಗೆ ದೇಶದ ಎಲ್ಲಾ ಜನತೆ ಕೈಜೋಡಿಸಬೇಕು ಎಂದು ಅನ್ನದಾತರು ಸೋಮವಾರ ಮನವಿ ಮಾಡಿದ್ದಾರೆ.
ವಿವಾದಾತ್ಮ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿ ನಾಳೆ ಕರೆ ನೀಡಿರುವ ಭಾರತ್ ಬಂದ್ ಗೆ ರಾಜಕೀಯ ಪಕ್ಷಗಳು ನೀಡಿರುವ ಬೆಂಬಲವನ್ನು ರೈತರು ಸ್ವಾಗತಿಸಿದ್ದಾರೆ.
ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಬಹುಜನ ಸಮಾಜ ಪಕ್ಷ, ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ, ಸಿಪಿಐ (ಎಂ)ಮತ್ತು ಡಿಎಂಕೆ ಪಕ್ಷಗಳು ಭಾರತ್ ಬಂದ್ ಗೆ ಬೆಂಬಲ ನೀಡಿದ್ದು, ದಿನವೀಡಿ ಮುಷ್ಕರದಲ್ಲಿ ಭಾಗವಹಿಸಲು ಮುಂದಾಗಿವೆ.
ಕೇಂದ್ರ ಸರ್ಕಾರ ಈಗಾಗಲೇ ರೈತರೊಂದಿಗೆ ಐದು ಸುತ್ತಿನ ಮಾತುಕತೆ ನಡೆಸಿದರೂ ಅನ್ನದಾತರ ಮನವೊಲಿಸುವಲ್ಲಿ ವಿಫಲವಾಗಿದ್ದು, ಬುಧವಾರ ಆರನೇ ಸುತ್ತಿನ ಮಾತುಕತೆ ಇದೆ. ಡಿಸೆಂಬರ್ 9 ರಂದು ಮುಂದಿನ ಸುತ್ತಿನ ಸಭೆಗೆ ಬರುವ ಮೊದಲು ಕೇಂದ್ರ ಸರ್ಕಾರ ಕೃಷಿ ಕಾನೂನು ತಿದ್ದುಪಡಿಯ ಹೊಸ ಕರಡನ್ನು ಕಳುಹಿಸುತ್ತದೆ ಎಂದು ರೈತರು ನಿರೀಕ್ಷಿಸಿದ್ದಾರೆ.
ರೈತರ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ದೆಹಲಿ ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಹರಿಯಾಣ ಮತ್ತು ಉತ್ತರ ಪ್ರದೇಶದ ಗಡಿಯಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜನೆ ಮಾಡಿದ್ದು, ಭದ್ರತೆ ಹೆಚ್ಚಿಸಿದ್ದಾರೆ.