ಸವಿತಾ ಸಮಾಜವನ್ನು ನಾನು ಅಪಮಾನ ಮಾಡಿಲ್ಲ, ತಪ್ಪುಗ್ರಹಿಕೆಗೆ ಅವಕಾಶ ಮಾಡಬೇಡಿ: ಸಿ.ಟಿ.ರವಿ
ಬೆಳಗಾವಿ (ಅ.30): ನಾನು ಸವಿತಾ ಸಮಾಜಕ್ಕೆ ಅವಹೇಳನಕಾರಿಯಾಗಿ ಮಾತನಾಡಿಲ್ಲ. ಸಮಾಜದವರು ಕೂಡ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಬೇಕು. ಆದರೂ ನನ್ನಿಂದ ಸಮುದಾಯಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ಅ.25ರಂದು ಸಿ.ಟಿ.ರವಿ ಅವರು ಚಿಕ್ಕಮಗಳೂರು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ಸವಿತಾ ಸಮುದಾಯ ದವರನ್ನು ನಿಂದಿಸಿದ್ದಾರೆ ಎನ್ನಲಾದ ವೈರಲ್ ವಿಡಿಯೋ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಸವಿತಾ ಸಮಾಜಕ್ಕೆ ಅವಹೇಳನಕಾರಿಯಾಗಿ ಮಾತನಾಡಿದ್ದಾಗಿ ಕೆಲವರು ಬಿಂಬಿಸುತ್ತಿದ್ದಾರೆ. ಆದರೆ, ನಾನು ಆ ರೀತಿ ಹೇಳಿಲ್ಲ. ತಪ್ಪು ಗ್ರಹಿಕೆಗೆ ಅವಕಾಶ ಮಾಡಿಕೊಡಬೇಡಿ. ಸವಿತಾ ಸಮಾಜಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ತನಿಖೆಗೆ ನಾನು ಆಗ್ರಹಿಸುತ್ತೇನೆ. ಸಮಾಜದವರು ಕೂಡ ಇದರ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.
ಹಿಂದೂ ಸಮಾಜ ಒಡೆಯುವ ಸಂಚು: ಹಿಂದೂ ಸಮಾಜವನ್ನು ಒಡೆಯುವುದು ಮುಂದೊಂದು ದಿನ ರಾಷ್ಟ್ರ ವಿರೋಧಿ ಸಂಚು ಮಾಡುವವರಿಗೆ ದಾರಿ ಆಗುತ್ತದೆ. ಯಾರೂ ಹಿಂದೂ ಸಮಾಜವನ್ನು ಬಿಡಬಾರದು. ಬದಲಾಗಿ ಆಚರಣೆಯಲ್ಲಿರುವ ಅಸ್ಪೃಶ್ಯತೆಯಂತ ದೋಷಗಳನ್ನು ತೊಡೆದುಹಾಕಿ ಹಿಂದೂ ಸಮಾಜವನ್ನು ಸಶಸ್ತ್ರಗೊಳಿಸಬೇಕು. ನಮಗೆ ಬಸವಣ್ಣನವರು ಬೇಕು, ಅಂಬೇಡ್ಕರ್ ಕೂಡ ಬೇಕು. ಹಿಂದುಗಳನ್ನು ಒಗ್ಗಟ್ಟಾಗಿ ಇಡುವ ಕೆಲಸ ಮಾಡಬೇಕು ಎಂದರು.





