ರಾಜ್ಯದ ಬೇರೆ ಭಾಗಗಳಲ್ಲೂ ಕಂಬಳ ಆಯೋಜನೆಗೆ ಸರಕಾರ ತೀರ್ಮಾನಿಸಬಹುದು: ಹೈಕೋರ್ಟ್

ಬೆಂಗಳೂರು : ರಾಜ್ಯದ ನಿರ್ದಿಷ್ಟ ಭೌಗೋಳಿಕ ಪ್ರದೇಶ ಅಥವಾ ಕೆಲ ಜಿಲ್ಲೆಗಳ ಆಚರಣೆ, ಸಂಪ್ರದಾಯಗಳು ಇಡೀ ರಾಜ್ಯದ ಸಂಪ್ರದಾಯವಾಗಿರುತ್ತದೆ. ನಿರ್ದಿಷ್ಟ ಸಂಪ್ರದಾಯಗಳನ್ನು ಆಚರಿಸಲಾಗುವ ಕರ್ನಾಟಕದ ಭಾಗಗಳನ್ನು ರಾಜ್ಯಕ್ಕೆ ಸೇರಿದ್ದಲ್ಲ ಎನ್ನಲಾಗುತ್ತದೆಯೇ? ಹಾಗೆ ಹೇಳಿದ್ದಲ್ಲಿ ಅದು ವಿಭಜಕ ಭಾವನೆ ಆಗಬಹುದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿ, ರಾಜ್ಯದ ಬೇರೆ ಭಾಗಗಳಲ್ಲೂ ಕಂಬಳ ಆಯೋಜನೆ ಸಂಬಂಧ ಕಾನೂನು-ನಿಯಮಗಳ ರೀತಿ ರಾಜ್ಯ ಸರಕಾರ ತೀರ್ಮಾನಿಸಬಹುದು ಎಂದು ಮೌಖಿಕವಾಗಿ ಹೇಳಿದೆ.

ಅಲ್ಲದೆ, ಇದರ ಬಗ್ಗೆ ವಿವರವಾದ ಆದೇಶ ಹೊರಡಿಸಲಾಗುವುದು ಎಂದೂ ನ್ಯಾಯಾಲಯ ತಿಳಿಸಿದೆ.

ಕರಾವಳಿ ಜಿಲ್ಲೆಗಳಾದ ದಕ್ಷಿಣ-ಉಡುಪಿ ಜಿಲ್ಲೆಗಳಲ್ಲಿ ಶತಮಾನಗಳಿಂದ ನಡೆಸಿಕೊಂಡು ಬರಲಾಗುತ್ತಿರುವ ಪಾರಂಪರಿಕ ಸಂಪ್ರದಾಯವಾಗಿರುವ ಕಂಬಳ ಕ್ರೀಡೆಯನ್ನು ರಾ‍ಜ್ಯದ ಬೇರೆ ಜಿಲ್ಲೆ ಅಥವಾ ಭಾಗಗಳಲ್ಲಿ ಆಯೋಜನೆ ಮಾಡುವುದನ್ನು ನಿರ್ಬಂಧಿಸಲು ಸರಕಾರಕ್ಕೆ ನಿರ್ದೇಶಿಸಬೇಕು. ಜತೆಗೆ, ಪಿಲಿಕುಳ ಜೈವಿಕ ಉದ್ಯಾನ ವನದ (ನಿಸರ್ಗಧಾಮ) ಬಳಿ ಕಂಬಳ ಆಯೋಜನೆಗೆ ಅನುಮತಿ ನೀಡಬಾರದು ಎಂದು ಕೋರಿ ‘ಪೀಪಲ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್’ (ಪೆಟಾ) ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದಲ್ಲದೆ, ಪಿಲಿಕುಳ ನಿಸರ್ಗಧಾಮವು ಜೈವಿಕ ಉದ್ಯಾನವನ ಎಂದು ಮಾಸ್ಟರ್ ಪ್ಲಾನ್ ಯೋಜನೆ ಇದ್ದರೆ ಅಲ್ಲಿ ಕಂಬಳ ಆಯೋಜನೆಗೆ ಅವಕಾಶ ಇರುವುದಿಲ್ಲ. ಜೈವಿಕ ಉದ್ಯಾನವನ್ನು ಹಬ್ಬದ ಮೈದಾನವಾಗಿ ಮಾಡಲಾಗದು. ಜೈವಿಕ ಉದ್ಯಾನವನ ಆಗಿದ್ದಲ್ಲಿ ಅಲ್ಲಿ ಕಂಬಳ ಆಯೋಜಿಸಬಹುದು ಎಂಬ ತಜ್ಞರ ವರದಿ ತಪ್ಪಾಗಲಿದೆ. ಆದ್ದರಿಂದ, ಪಿಲಿಕುಳಕದ ವಾಸ್ತವ ಸ್ಥಾನಮಾನದ ಬಗ್ಗೆ ಸರಕಾರ ವಿವರಣೆ ನೀಡಬೇಕು. ಅದಾದ ಬಳಿಕ ಪಿಲಿಕುಳದಲ್ಲಿ ಕಂಬಳ ಆಯೋಜನೆಯ ವಿಷಯವನ್ನು ಮುಂದಿನ ವಿಚಾರಣೆ ವೇಳೆ ಪರಿಶೀಲಿಸಲಾಗುವುದು ಎಂದು ಹೇಳಿದ ನ್ಯಾಯಪೀಠ ವಿಚಾರಣೆಯನ್ನು ನವೆಂಬರ್ 11ಕ್ಕೆ ಮುಂದೂಡಿತು.

ಅಲ್ಲದೇ ಮೂಲ ವಿಷಯದ ಬಗ್ಗೆ ಯಾವುದೇ ವಾದ ಮಂಡನೆ, ಲಿಖಿತ ಹೇಳಿಕೆಗಳಿಗೆ ಅವಕಾಶವಿಲ್ಲ ಎಂದು ನ್ಯಾಯಪೀಠ ಹೇಳಿದ್ದರಿಂದ ರಾಜ್ಯದ ಬೇರೆ ಕಡೆ ಕಂಬಳ ಆಯೋಜನೆಗೆ ಸಂಬಂಧಿಸಿದಂತೆ ನವೆಂಬರ್ 11ಕ್ಕೆ ಅಂತಿಮ ಆದೇಶ ಹೊರಬೀಳುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *

error: Content is protected !!