ಬೇಲೂರು: ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಟ್ಟ ಪ್ರಕರಣ- ಮಹಿಳೆಯ ಬಂಧನ

ಹಾಸನ : ಬೇಲೂರಿನ ಪುರಸಭೆ ಆವರಣದಲ್ಲಿರುವ ದೇವಾಲಯದಲ್ಲಿ ಗಣೇಶ ವಿಗ್ರಹದ ಮೇಲೆ ಚಪ್ಪಲಿ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ಲೀಲಮ್ಮ ಎಂಬ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ದೇವಾಲಯದೊಳಗೆ ಮಹಿಳೆಯ ಪ್ರವೇಶ ಹಾಗೂ ಹೊರ ಹೋಗಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದ್ದರು. ಹಾಸನದ ಗುಡ್ಡೇನಹಳ್ಳಿ ಬಳಿ ಲೀಲಮ್ಮ ಎಂಬ ಮಹಿಳೆಯನ್ನು ಬಾಣಾವರ ಪಿಎಸ್‌ಐ ಸುರೇಶ್ ನೇತೃತ್ವದ ತಂಡ ಬಂಧಿಸಿದೆ. ಪ್ರಸ್ತುತ ಮಹಿಳೆಯನ್ನು ವಿಚಾರಣೆಗೊಳಪಡಿಸಲಾಗಿದೆ.

ಈ ಘಟನೆಯ ಬಳಿಕ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ಬೇಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಯನ್ನು ಶೀಘ್ರ ಬಂಧಿಸಬೇಕೆಂದು ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಹೀಗಾಗಿ ಪೊಲೀಸರು 8 ತನಿಖಾ ತಂಡಗಳನ್ನು ರಚಿಸಿ, ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿಟಿವಿ ದೃಶ್ಯಗಳಲ್ಲಿ ಮಹಿಳೆ ಚಪ್ಪಲಿ ಧರಿಸಿ ಒಳ ಹೋಗಿ, ಬರಿಗಾಲಿನಲ್ಲಿ ಹೊರ ಬಂದಿರುವುದು ದೃಢಪಟ್ಟಿತ್ತು. ಇದರಿಂದಲೇ ಮಹಿಳೆ ಈ ಕೃತ್ಯ ಎಸಗಿರುವ ಶಂಕೆ ಗಟ್ಟಿಯಾಯಿತು. ಸದ್ಯ ಪೊಲೀಸರು ಲೀಲಮ್ಮನನ್ನು ಬಂಧಿಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!