ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಗಾಂಜಾ ಮಾರಾಟ: ಆರೋಪಿ ಬಂಧನ, 30 ಲಕ್ಷ ರೂ. ಮೌಲ್ಯದ ಗಾಂಜಾ ವಶ
ಬೆಂಗಳೂರು: ಟ್ರಾವೆಲ್ಸ್ ಏಜೆನ್ಸಿ ಸೋಗಿನಲ್ಲಿ ಕಾರಿನಲ್ಲಿ ಮಾದಕ ವಸ್ತುಗಳನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೇಂದ್ರ ವಿಭಾಗದ ಎಸ್.ಜೆ.ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರ್.ಪ್ರದೀಪ್ ಕುಮಾರ್ ಅಲಿಯಾಸ್ ಪ್ರದೀಪ್ (36) ಬಂಧಿತ ಆರೋಪಿ. ಆರೋಪಿಯಿಂದ 30 ಲಕ್ಷ ರೂ. ಮೌಲ್ಯದ 60 ಕೆ.ಜಿ.835 ಗ್ರಾಂ ತೂಕವುಳ್ಳ ಮಾದಕ ವಸ್ತು ಗಾಂಜಾ, ಒಂದು ಜೈಲೋ ಕಾರು, ಮೊಬೈಲ್ ಫೋನ್, ಒಂದು ಸಾವಿರ ರೂ. ನಗದು ವಶಪಡಿಸಿಕೊಳ್ಳಲಾಗಿದೆ.
ನವೆಂಬರ್ 20ರಂದು ಮಧ್ಯಾಹ್ನ ಎಸ್.ಜೆ.ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯ ಎಂ.ಎಸ್. ಎಂಟರ್ ಪ್ರೈಸಸ್ ನಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಟ್ಟಡದ ಮುಂಭಾಗದಲ್ಲಿ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಬಂದಿದ್ದ ಆರೋಪಿಯನ್ನು ಹಿಡಿದು ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯ ವಿರುದ್ಧ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿ ಆರ್.ಪ್ರದೀಪ್ ಕುಮಾರ್ ಬೆಂಗಳೂರು ಟ್ರಾನ್ಸ್ ಪೋರ್ಟ್ ಸಲ್ಯೂಷನ್ –ಬಿಟಿಎಸ್ ಎಂಬ ಹೆಸರಿನ ಟ್ರಾವೆನ್ಸ್ ಏಜೆನ್ಸಿ ಇಟ್ಟುಕೊಂಡು ಸುಮಾರು 25 ಕಾರುಗಳ ಮಾಲೀಕನಾಗಿದ್ದು, 5 ವರ್ಷಗಳ ಹಿಂದೆ ಕೋಲಾರ ನಿವಾಸಿ ಸಲೀಂ ಎಂಬವನಿಂದ ಮಾದಕ ವಸ್ತು ಗಾಂಜಾ ಖರೀದಿ ಮಾಡಿ ತನ್ನದೇ ಟ್ರಾವೆಲ್ಸ್ ಕಾರುಗಳಲ್ಲಿ ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡಿ ಹಣ ಸಂಪಾದಿಸುತ್ತಿದ್ದುದು ತನಿಖೆಯಿಂದ ಬೆಳಕಿಗೆ ಬಂದಿದೆ. ಸಲೀಂ ಬಂಧನಕ್ಕೆ ಬಲೆ ಬೀಸಲಾಗಿದೆ.
ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರ ಮಾರ್ಗದರ್ಶನದಲ್ಲಿ ಹಲಸೂರು ಗೇಟ್ ಎಸಿಪಿ ನಜ್ಮಾ ಫಾರೂಖಿ ಅವರ ನೇತೃತ್ವದಲ್ಲಿ ಎಸ್.ಜೆ.ಪಾರ್ಕ್ ಪೊಲೀಸ್ ಇನ್ಸ್ ಪೆಕ್ಟರ್ ಮಿರ್ಜಾ ಅಲೀ ರಜಾ ಮತ್ತು ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು