ಕೋವಿಡ್: ಜನವರಿಗೆ ಎರಡನೇ ಅಲೆ?

ಬೆಂಗಳೂರು: ರಾಜ್ಯದಲ್ಲಿ ಮುಂಬರುವ ಜನವರಿ ಅಥವಾ ಫೆಬ್ರುವರಿಯಲ್ಲಿ
ಕೋವಿಡ್ ಎರಡನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಮಾರ್ಚ್ 8ರಂದು ಮೊದಲ ಪ್ರಕರಣ ವರದಿಯಾದರೂ ಜುಲೈ ಬಳಿಕ ಸೋಂಕಿತರ ಸಂಖ್ಯೆ ಏರಿಕೆ ಕಂಡಿತ್ತು. ಆಗಸ್ಟ್ ತಿಂಗಳ ಬಹುತೇಕ ದಿನಗಳ 24 ಗಂಟೆಗಳ ಅವಧಿಯಲ್ಲಿ ಹೊಸ ಪ್ರಕರಣಗಳ ಸಂಖ್ಯೆ 10 ಸಾವಿರದ ಗಡಿಯ ಆಸುಪಾಸಿನಲ್ಲಿದ್ದವು. ಅಕ್ಟೋಬರ್ ಅಂತ್ಯದ ಬಳಿಕ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದ್ದು, ಒಂದು ತಿಂಗಳಿಂದ ಪ್ರತಿನಿತ್ಯ ಸರಾಸರಿ 2 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ.

ಈ ಏರಿಳಿತದ ಬಳಿಕ ಅನ್ಯ ರಾಜ್ಯಗಳು ಹಾಗೂ ವಿದೇಶಗಳಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಮತ್ತೆ ಏರುಗತಿ ಪಡೆದ ಕಾರಣ ರಾಜ್ಯದಲ್ಲಿಯೂ ಎರಡನೇ ಅಲೆಯ ಆತಂಕ ಶುರುವಾಗಿದೆ. ಇದಕ್ಕೆ ಪೂರಕವಾಗಿ ತಜ್ಞರು ಅಧ್ಯಯನ ನಡೆಸಿ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಎರಡನೇ ಅಲೆಗೆ ಸಂಬಂಧಿಸಿದಂತೆ ಸಭೆ ನಡೆಸಿದ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು, ‘ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆಯ ಪತ್ತೆ ಹಾಗೂ ನಿಯಂತ್ರಣಕ್ಕೆ ಸಲಹೆ’ ಶೀರ್ಷಿಕೆಯ 7 ಪುಟಗಳ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ‘ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ 7 ದಿನಗಳ ಸರಾಸರಿ ಪ್ರಕರಣಗಳ ಸಂಖ್ಯೆ ಹಾಗೂ ವೈರಾಣುಗಳು ದ್ವಿಗುಣವಾಗುವ ಸಂಖ್ಯೆಯನ್ನು ಈ ವೇಳೆ ಸೂಕ್ಷ್ಮವಾಗಿ ಗುರುತಿಸಬೇಕು’ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!