ಬೆಂಕಿ ಅವಘಡ: ಯುವಕರ ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಮಣಿಪಾಲ(ಉಡುಪಿ ಟೈಮ್ಸ್ ವರದಿ): ಮಣಿಪಾಲದ ದುಗ್ಲಿ ಪದವಿನ ಜನವಸತಿ ಪ್ರದೇಶದಲ್ಲಿ ತಡ ರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಘಟನೆ ವೇಳೆ ಆ ದಾರಿಯಲ್ಲಿ ಸಾಗುತ್ತಿದ್ದ ಯುವಕರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ.
ನಿನ್ನೆ ರಾತ್ರಿ 10.30 ರ ಸುಮಾರಿಗೆ ಮಣಿಪಾಲ – ಅಲೆವೂರು ರಸ್ತೆಯ ದುಗ್ಲಿ ಪದವಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇದು ಸಾಕಷ್ಟು ಜನಸಂಖ್ಯೆಯನ್ನು ಹೊಂದಿರುವ ವಸತಿ ಪ್ರದೇಶವಾಗಿದ್ದರಿಂದ ಭಾರೀ ಅಪಾಯದ ಸಾಧ್ಯತೆ ಇತ್ತು.
ಆದರೆ ಈ ಸಂದರ್ಭದಲ್ಲಿ ಈ ಮಾರ್ಗವಾಗಿ ಬೈಕ್ನಲ್ಲಿ ಚಲಿಸುತ್ತಿದ್ದ ಅಲೆವೂರಿನ ಜಲೇಶ್ ಶೆಟ್ಟಿ ಮತ್ತು ಕುಕ್ಕಿಕಟ್ಟೆಯ ನವೀನ್ ಶೇರಿಗಾರ್ ಬೆಂಕಿ ಹತ್ತಿ ಉರಿಯುತ್ತಿರುವುದನ್ನು ಗಮನಿಸಿ ತಕ್ಷಣವೇ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಸ್ಥಳೀಯರನ್ನು ಎಬ್ಬಿಸಿ ಅಗ್ನಿ ನಂದಿಸುವಲ್ಲಿ ಶ್ರಮಿಸಿದ್ದಾರೆ.
ಈ ಇಬ್ಬರು ಯುವಕರ ಸಮಯಕ್ಕೆ ಸರಿಯಾದ ಸಹಾಯದಿಂದಾಗಿ ಅನಾಹುತ ತಪ್ಪಿದೆ. ಇಲ್ಲದಿದ್ದಲ್ಲಿ ಭಾರೀ ಪ್ರಮಾಣದ ನಷ್ಟವಾಗುತ್ತಿತ್ತು ಎಂದು ಸ್ಥಳೀಯರು ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.