ಗುಜರಾತ್‌: ವಿಮಾನ ಪತನಕ್ಕೂ ಮೊದಲು ಎಟಿಸಿಗೆ ತುರ್ತು ಕರೆ ಮಾಡಿದ್ದ ಪೈಲಟ್!

ಅಹ್ಮದಾಬಾದ್ : ಗುಜರಾತ್‌ನ ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಲಂಡನ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಪತನಕ್ಕೂ ಮೊದಲು ವಾಯು ಸಂಚಾರ ನಿಯಂತ್ರಣ ಘಟಕ (ಎಟಿಸಿ)ಕ್ಕೆ ಅಪಾಯದ ಮುನ್ಸೂಚನೆಯಾಗಿ ಪೈಲಟ್ ತುರ್ತು ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ.

ನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಹೇಳಿಕೆ ಪ್ರಕಾರ, ವಿಮಾನದಲ್ಲಿ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಮತ್ತು ಸಹ ಪೈಲಟ್ ಕ್ಲೈವ್ ಕುಂದರ್ ಅವರಿದ್ದರು. ಕ್ಯಾಪ್ಟನ್ ಸುಮೀತ್ ಅವರು 8,200 ಗಂಟೆಗಳ ಹಾರಾಟದ ಅನುಭವ ಹೊಂದಿರುವ ಲೈನ್ ಟ್ರೈನಿಂಗ್ ಕ್ಯಾಪ್ಟನ್ (LTC) ಆಗಿದ್ದರೆ, ಸಹ ಪೈಲಟ್ 1,100 ಗಂಟೆಗಳ ಹಾರಾಟದ ಅನುಭವವನ್ನು ಹೊಂದಿದ್ದಾರೆ.

ಗುರುವಾರ ಮಧ್ಯಾಹ್ನ 1.39ಕ್ಕೆ ರನ್‌ವೇ 23ರಿಂದ ವಿಮಾನ ಟೇಕ್ಆಫ್ ಆಗಿತ್ತು. ಇದಾದ ಕೆಲವೇ ಕ್ಷಣಗಳಲ್ಲಿ ವಾಯು ಸಂಚಾರ ನಿಯಂತ್ರಣ ಘಟಕ (ಎಟಿಸಿ)ಕ್ಕೆ ಅಪಯಾದ ಮುನ್ಸೂಚನೆಯಾಗಿ ಪೈಲಟ್ ತುರ್ತು ಕರೆ ಮಾಡಿದ್ದರು. ಪೈಲಟ್ ವಾಪಸ್ ಕರೆ ಮಾಡಿದರೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ ಎಂದು ಡಿಜಿಸಿಎ ಹೇಳಿದೆ.

ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ. ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ವಿಮಾನ ಹತ್ತಿದ್ದರು.

ಅಹಮದಾಬಾದ್: ಗುರುವಾರ ಮಧ್ಯಾಹ್ನ ಪತನಗೊಂಡ ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ವಿಮಾನ ನಿಲ್ದಾಣದಿಂದ ಲಂಡನ್‌ನ ಗಾಟ್ವಿಕ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿದ್ದ ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಹಿತ 240 ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಎಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.

“ವಿಮಾನ ಅಪಘಾತದಲ್ಲಿ ಯಾರೂ ಬದುಕುಳಿದಿರುವ ಸಾಧ್ಯತೆಯಿಲ್ಲ” ಎಂದು ಪೊಲೀಸ್‌ ಕಮಿಷನರ್‌ ಜಿ.ಎಸ್. ಮಲಿಕ್ ಅವರು ಅಸೋಸಿಯೇಟೆಡ್ ಪ್ರೆಸ್‌ ಗೆ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ. ವಸತಿ ಪ್ರದೇಶದಲ್ಲಿ ವಿಮಾನ ಅಪಘಾತಕ್ಕೀಡಾಗಿರುವುದರಿಂದ, “ಪತನಗೊಂಡ ಸ್ಥಳದಲ್ಲಿದ್ದ ಸ್ಥಳೀಯರೂ ಮೃತಪಟ್ಟಿರುವ ಸಾಧ್ಯತೆಯಿದೆ” ಎಂದು ಅವರು ಹೇಳಿದರು.”

ವಿಮಾನದಲ್ಲಿದ್ದ 242 ಪ್ರಯಾಣಿಕರಲ್ಲಿ ಇಬ್ಬರು ಪೈಲಟ್‌ಗಳು ಮತ್ತು 2 ಮಕ್ಕಳು ಸೇರಿದಂತೆ 8 ಸಿಬ್ಬಂದಿ ಇದ್ದರು. ಇವರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಪ್ರಯಾಣಿಸುತ್ತಿದ್ದರು. ವಿಮಾನದ ಪೈಲಟ್‌ನ ಹೆಸರು ಸುಮಿತ್ ಸಭರ್ವಾಲ್ ಹಾಗೂ ಸಹ-ಪೈಲಟ್ ಕ್ಲೈವ್ ಕುಂದರ್ ಎಂದು ಹೇಳಲಾಗುತ್ತಿದೆ. 

ನಾಗರಿಕ ವಿಮಾನಯಾನ ಸಚಿವಾಲಯದಿಂದ ಸಹಾಯ ಕೇಂದ್ರ ವಿಮಾನದ ಅಪಘಾತಕ್ಕೆ ಸಂಬಂಧಿಸಿದಂತೆ ಎಲ್ಲಾ ವಿವರಗಳನ್ನು ಸಂಘಟಿಸಲು ನಾಗರಿಕ ವಿಮಾನಯಾನ ಸಚಿವಾಲಯದಲ್ಲಿ ಕಾರ್ಯಾಚರಣಾ ನಿಯಂತ್ರಣ ಕೊಠಡಿಯನ್ನು ಸಕ್ರಿಯಗೊಳಿಸಲಾಗಿದೆ. ಅದಕ್ಕಾಗಿ 011-24610843, 9650391859 ದೂ.ಸಂಖ್ಯೆಯನ್ನು ತೆರೆಯಲಾಗಿದೆ.

Leave a Reply

Your email address will not be published. Required fields are marked *

error: Content is protected !!