‘ಅಭಿಮಾನಿಗಳ ಸುರಕ್ಷತೆಯೇ ಮುಖ್ಯ’.. ದುರಂತದ ಬಳಿಕ RCB, ಕೊಹ್ಲಿ ಮೊದಲ ಪ್ರತಿಕ್ರಿಯೆ
ಬೆಂಗಳೂರು: ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ಪ್ರಕರಣದಲ್ಲಿ 11 ಮಂದಿ ಸಾವನ್ನಪ್ಪಿದ ದುರಂತಕ್ಕೆ ಸಂಭವಿಸಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ತನ್ನ ಪ್ರತಿಕ್ರಿಯೆ ನೀಡಿದೆ.
ಐಪಿಎಲ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ್ದ ಆರ್ ಸಿಬಿ ತಂಡ 18 ವರ್ಷಗಳ ಬಳಿಕ ತನ್ನ ಚೊಚ್ಚಲ ಐಪಿಎಲ್ ಪ್ರಶಸ್ತಿ ಎತ್ತಿ ಹಿಡಿದಿದ್ದು, ಇದೇ ಖುಷಿಯನ್ನು ಬೆಂಗಳೂರಿನಲ್ಲಿ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳಲು ಮುಂದಾಗಿತ್ತು.

ಆಟಗಾರರ ಬಿಸಿ ಶೆಡ್ಯೂಲ್ ನಡುವೆಯೂ ಆರ್ ಸಿಬಿ ತಂಡ ಆಟಗಾರರನ್ನು ಬೆಂಗಳೂರಿಗೆ ಕರೆತಂದು ಅಭಿಮಾನಿಗಳ ಜೊತೆ ಸಂಭ್ರಮಾಚರಣೆ ಮಾಡಲು ನಿರ್ಧರಿಸಿತ್ತು. ಇದಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಕೂಡ ಆಯೋಜನೆ ಮಾಡಲಾಗಿತ್ತು. ಆದರೆ ಇದೇ ಚಿನ್ನಸ್ವಾಮಿ ಕ್ರೀಡಾಂಗಣ ಇದೀಗ ಸೂತಕ ಮನೆಯಂತಾಗಿದೆ.
ದುರಂತದ ಬಳಿಕ ಆರ್ ಸಿಬಿ ಮೊದಲ ಪ್ರತಿಕ್ರಿಯೆ
ಇನ್ನು 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿಕ್ರಿಯೆ ನೀಡಿದ್ದು, ಈ ಕುರಿತು ಎಕ್ಸ್ ಖಾತೆಯನ್ನು ಪತ್ರಿಕಾ ಪ್ರಕಟಣೆ ಹೊರಡಿಸಿದೆ.
ಪ್ರಕಟಣೆಯಲ್ಲಿ, ‘ಇಂದು ಮಧ್ಯಾಹ್ನ ತಂಡದ ಆಗಮನದ ನಿರೀಕ್ಷೆಯಲ್ಲಿ ಬೆಂಗಳೂರಿನಾದ್ಯಂತ ಸಾರ್ವಜನಿಕ ಸಭೆಗಳ ಕುರಿತು ಮಾಧ್ಯಮ ವರದಿಗಳ ಮೂಲಕ ಬೆಳಕಿಗೆ ಬಂದಿರುವ ದುರದೃಷ್ಟಕರ ಘಟನೆಗಳಿಂದ ನಾವು ತೀವ್ರ ದುಃಖಿತರಾಗಿದ್ದೇವೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮ ನಮಗೆ ಅತ್ಯಂತ ಮುಖ್ಯವಾಗಿದೆ. ಜೀವಹಾನಿಗೆ ಆರ್‌ಸಿಬಿ ಶೋಕ ವ್ಯಕ್ತಪಡಿಸುತ್ತದೆ ಮತ್ತು ಪೀಡಿತ ಕುಟುಂಬಗಳಿಗೆ ನಮ್ಮ ಸಂತಾಪವನ್ನು ವ್ಯಕ್ತಪಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ಅಂತೆಯೇ, ‘ಪರಿಸ್ಥಿತಿಯ ಬಗ್ಗೆ ತಿಳಿದ ತಕ್ಷಣ, ನಾವು ನಮ್ಮ ಕಾರ್ಯಕ್ರಮವನ್ನು ತ್ವರಿತವಾಗಿ ತಿದ್ದುಪಡಿ ಮಾಡಿದ್ದೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಲಹೆಯನ್ನು ಅನುಸರಿಸಿದ್ದೇವೆ. ದಯವಿಟ್ಟು ಸುರಕ್ಷಿತವಾಗಿರಲು ನಮ್ಮ ಎಲ್ಲಾ ಬೆಂಬಲಿಗರನ್ನು ನಾವು ಒತ್ತಾಯಿಸುತ್ತೇವೆ ಎಂದು ಮನವಿ ಮಾಡಿಕೊಂಡಿದೆ.
ವಿರಾಟ್ ಕೊಹ್ಲಿ ಹೇಳಿದ್ದೇನು?
ಇನ್ನು ಇದೇ ವಿಚಾರವಾಗಿ ವಿರಾಟ್ ಕೊಹ್ಲಿ ಕೂಡ ಪೋಸ್ಟ್ ಮಾಡಿದ್ದು, “ಮಾತೇ ಬರುತ್ತಿಲ್ಲ.. ಹೃದಯ ಒಡೆದಿದೆ’ ಎಂದು ಇನ್ ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್‌ಸಿಬಿಯ ಪ್ರಸ್ತುತ ಬ್ರಾಂಡ್ ಮೌಲ್ಯ
ಬ್ರ್ಯಾಂಡ್ ಫೈನಾನ್ಸ್ ಐಪಿಎಲ್ 2024 ವರದಿಯ ಪ್ರಕಾರ, ಆರ್‌ಸಿಬಿಯ ಬ್ರಾಂಡ್ ಮೌಲ್ಯವು 117 ಮಿಲಿಯನ್ ಡಾಲರ್ (ಸುಮಾರು ರೂ. 1,000 ಕೋಟಿ) ಆಗಿದ್ದು, ಹಿಂದಿನ ವರ್ಷಕ್ಕಿಂತ ಶೇಕಡಾ 67 ರಷ್ಟು ಹೆಚ್ಚಾಗಿದೆ. ಈ ಬೆಳವಣಿಗೆಯು ಆರ್‌ಸಿಬಿಯನ್ನು ಮೂರನೇ ಅತ್ಯಂತ ಮೌಲ್ಯಯುತ ಐಪಿಎಲ್ ಫ್ರಾಂಚೈಸ್ ಆಗಿ ಇರಿಸಿದೆ. ಈ ಪಟ್ಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 122 ಮಿಲಿಯನ್ ಡಾಲರ್ ನೊಂದಿಗೆ ಅಗ್ರಸ್ಥಾನದಲ್ಲಿದ್ದು, 2ನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ (MI) 119 ಮಿಲಿಯನ್ ಡಾಲರ್ ಮೌಲ್ಯ ಹೊಂದಿದೆ. ಆರ್ ಸಿಬಿಯ ಮೌಲ್ಯ ಏರಿಕೆಗೆ ತಂಡದ ಅಭಿಮಾನಿಗಳ ನಿರಂತರ ಭಾಗವಹಿಸುವಿಕೆ, ಕಾರ್ಯತಂತ್ರದ ಮಾರ್ಕೆಟಿಂಗ್ ಮತ್ತು ವಿರಾಟ್ ಕೊಹ್ಲಿಯಂತಹ ದಿಗ್ಗಜರ ಉಪಸ್ಥಿತಿ ಕಾರಣ ಎಂದು ಹೇಳಲಾಗಿದೆ.
‘ಸರ್ಕಾರಿ ಪ್ರಾಯೋಜಿತ ಕೊಲೆ’ ಎಂದ ಬಿಜೆಪಿ
ಬೆಂಗಳೂರು: ಐಪಿಎಲ್ 2025ರ ಟೂರ್ನಿಯಲ್ಲಿ ಚಾಂಪಿಯನ್ ಆದ ಬಳಿಕ ಇಂದು ಬೆಂಗಳೂರಿನಲ್ಲಿ ನಡೆದ RCB ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತಕ್ಕೆ ಸರ್ಕಾರವೇ ಹೊಣೆಯಾಗಿದ್ದು, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ವಿಪಕ್ಷ ಬಿಜೆಪಿ ಕಿಡಿಕಾರಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಬರೋಬ್ಬರಿ 18 ವರ್ಷಗಳ ಬಳಿಕ ಐಪಿಎಲ್ (IPL) ಟ್ರೋಫಿ ಗೆದ್ದಿದ್ದು, ಆ ಮೂಲಕ ಕೋಟ್ಯಾಂತರ ಆರ್‌ಸಿಬಿ (RCB) ಅಭಿಮಾನಿಗಳ ಕನಸನ್ನು ನನಸು ಮಾಡಿದೆ.
ಇದಕ್ಕಾಗಿ ಇಂದು ಆರ್ ಸಿಬಿ ತಂಡ ಬೆಂಗಳೂರಿನಲ್ಲಿ ಅಭಿಮಾನಿಗಳೊಂದಿಗೆ ಸಂಭ್ರಮಾಚರಣೆ ನಡೆಸಲು ಮುಂದಾಗಿತ್ತು. ಆದರೆ ಈ ಸಂಭ್ರಮಾಚರಣೆಯೇ ಇದೀಗ ದುರಂತಕ್ಕೆ ಎಡೆಮಾಡಿಕೊಟ್ಟಿದೆ.
ಇಂದು ಸಂಜೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಧಾವಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದಾರೆ. ಇದೇ ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿಕಾರಿದ್ದು, ಇದು ಸರ್ಕಾರಿ ಪ್ರಾಯೋಜಿತ ಕೊಲೆ ಎಂದು ಕಿಡಿಕಾರಿದೆ.
ಈ ಕುರಿತು ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಬಿಜೆಪಿ, ‘ಸಂಭ್ರಮದ ಮನೆಯಲ್ಲಿ ಸೂತಕ ಉಂಟಾಗಲು ನೇರ ಕಾರಣ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ. ಈ ಕೊಲೆಗಡುಕ ಸರ್ಕಾರದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಬೇಕು ಎಂದು ಬಿಜೆಪಿ ಟ್ವೀಟ್ ಮಾಡಿದೆ. ಅಂತೆಯೇ ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಬಿಜೆಪಿ ಪರಿಷತ್ ಸದಸ್ಯ ಸಿಟಿ ರವಿ, ‘ಇದು ಪೂರ್ವಸಿದ್ಧತೆಯಿಲ್ಲದ ಸಂಭ್ರಮ, ಸರ್ಕಾರಿ ಪ್ರಾಯೋಜಿತ ಕೊಲೆ. ಈ ಸಾವಿಗೆ ರಾಜ್ಯ ಸರ್ಕಾರವೇ ಹೊಣೆ’ ಎಂದು ಆಕ್ರೋಶ ಹಾಕಿದ್ದಾರೆ.
ಅಲ್ಲದೆ, ‘ಗೆಲುವಿನ ಸಂಭ್ರಮ ಕ್ರೀಡಾಭಿಮಾನಿಗಳಿಗೆ ಇರುವುದು ಸ್ವಾಭಾವಿಕ. ಆ ಸಂಭ್ರಮದಲ್ಲಿ ರಾಜಕೀಯ ತೆವಲು ತೀರಿಸಿಕೊಳ್ಳಲು ಹೊರಟ ಇವರು,ಪೋಲೀಸರ ಎಚ್ಚರಿಕೆಯನ್ನು ಕಡೆಗಣಿಸಿ, ಅನುಮತಿಯನ್ನೂ ಪಡೆಯದೆ ಎರಡೆರಡು ಕಡೆ ಸಂಭ್ರಮಾಚರಣೆ. ಇವರ ವೈಭವೀಕರಣ ಮಾಡಲು ಹೋಗಿ ಅಮಾಯಕರನ್ನು ಬಲಿ ತೆಗೆದುಕೊಂಡಿದ್ದೀರಿ. ಕ್ರೀಡಾಭಿಮಾನಿಗಳ ಸಾವಿಗೆ ಹೊಣೆ ಯಾರು? ಕೊಲೆಗಾರರು ನೀವೇ. ಗೆಲುವಿನ ಸಂಭ್ರಮವನ್ನು ಸಾವಿನ ಸೂತಕವಾಗಿ ಪರಿವರ್ತಿಸಿದವರು ನೀವು. ಇದು ಆಕಸ್ಮಿಕ ಸಾವಲ್ಲ. ಕಾರ್ಯಕ್ರಮ ಮಾಡುವ ನಿರ್ಧಾರ ತೆಗೆದುಕೊಂಡ ಆಯೋಜಕರೇ ಈ ಸಾವಿಗೆ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.





