ಐಪಿಎಲ್ ಫೈನಲ್ ಪಂದ್ಯಕ್ಕೂ ಮುನ್ನವೇ ನರೇಂದ್ರ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟ!

ಅಹಮದಾಬಾದ್, ಜೂ. 03 : ಆರ್‌ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ತಂಡದ ನಡುವೆ ಐಪಿಎಲ್ ಫೈನಲ್ ಪಂದ್ಯ ನಡೆಯಲು ಇನ್ನೇನು ಕೆಲವೇ ಗಂಟೆಗಳು ಬಾಕಿಯುಳಿದಿದೆ. ಆದರೆ ಫೈನಲ್ ಪಂದ್ಯಕ್ಕೂ ಮುನ್ನ ನರೇಂದ್ರ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಸ್ಫೋಟಗೊಂಡಿದೆ.

ಇಂದು ಬೆಳಗ್ಗೆ ಕ್ರೀಡಾಂಗಣದ ಮುಖ್ಯ ದ್ವಾರದ ಹೊರಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸಿಲಿಂಡರ್ ಸ್ಪೋಟದಿಂದ ಸ್ವಲ್ಪ ಸಮಯದವರೆಗೆ ಭೀತಿ ಆವರಿಸಿತ್ತು. ಘಟನೆ ನಡೆದ ತಕ್ಷಣವೇ ಬೆಂಕಿಯನ್ನು ನಂದಿಸಲಾಯಿತು.ಕ್ರೀಡಾಂಗಣದ ಹೊರಗಿನ ಫುಟ್‌ಪಾತ್‌ನಲ್ಲಿ ಆಹಾರ ಪದಾರ್ಥಗಳನ್ನು ಮಾರಾಟ ಮಾಡುವವರ ನಿರ್ಲಕ್ಷ್ಯದಿಂದಾಗಿ ಸಿಲಿಂಡರ್ ಸ್ಫೋಟಗೊಂಡಿರಬಹುದು ಎಂದು ಶಂಕಿಸಲಾಗಿದೆ. ಇನ್ನು ಘಟನೆಯಿಂದ ಸ್ಥಳದಲ್ಲಿ ಅವ್ಯವಸ್ಥೆ ಉಂಟಾಗಿತ್ತು, ಆದರೆ ಸ್ವಲ್ಪ ಸಮಯದ ನಂತರ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿತು ಎನ್ನಲಾಗಿದೆ.ಸಿಲಿಂಡರ್ ಸ್ಫೋಟದಿಂದಾಗಿ ಪಂದ್ಯದಲ್ಲಿ ಯಾವುದೇ ಬದಲಾವಣೆ ಇಲ್ಲವೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಫೈನಲ್ ಪಂದ್ಯಕ್ಕೂ ಮುನ್ನ ಅದ್ಧೂರಿ ಸಮಾರೋಪ ಸಮಾರಂಭ ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ. ಆಪರೇಷನ್ ಸಿಂಧೂರಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಸಮಾರಂಭವನ್ನು ಭಾರತೀಯ ಸೇನೆಗೆ ಸಮರ್ಪಿಸಲಾಗುತ್ತದೆ. ಖ್ಯಾತ ಗಾಯಕ ಶಂಕರ್ ಮಹದೇವನ್ ಸೇರಿದಂತೆ ಅನೇಕರು ಪ್ರದರ್ಶನ ನೀಡಲಿದ್ದಾರೆ ಎಂದು ತಿಳಿದುಬಂದಿದೆ.


Leave a Reply

Your email address will not be published. Required fields are marked *

error: Content is protected !!