ಕರ್ನಾಟಕದ ಪ್ರಭಾರಿ ಡಿಜಿಪಿಯಾಗಿ ಎಂ.ಎ. ಸಲೀಂ ನೇಮಕ
ಬೆಂಗಳೂರು, ಮೇ. 21: ಹಿರಿಯ ಐಪಿಎಸ್ ಅಧಿಕಾರಿ ಡಾ.ಎಂ.ಎ.ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಮಾಡಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಅವರು ಕಳೆದ ಏಪ್ರಿಲ್ 30ರಂದು ನಿವೃತ್ತಿಯಾಗಿದ್ದು, ಅವರ ಸೇವಾವಧಿಯನ್ನು ಎರಡು ವರ್ಷಗಳಿಗೆ ಪೂರ್ತಿಗೊಳಿಸಲು ಮೇ 21ರ ವರೆಗೆ ರಾಜ್ಯ ಸರಕಾರ ವಿಸ್ತರಿಸಿತ್ತು. ಇದೀಗ ಡಾ.ಎಂ.ಎ. ಸಲೀಂ ಅವರನ್ನು ರಾಜ್ಯದ ಪ್ರಭಾರ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಳಿಸಿ ಆದೇಶ ಮಾಡಲಾಗಿದೆ.
ಪ್ರಸ್ತುತ, ಡಿಜಿಪಿ ಹುದ್ದೆಗೆ ಮೂವರು ಹಿರಿಯ ಅಧಿಕಾರಿಗಳ ಹೆಸರುಗಳು ಕೇಳಿಬರುತ್ತಿದ್ದವು, ಪ್ರಶಾಂತ್ ಕುಮಾರ್ ಠಾಕೂರ್ (ಡಿಜಿಪಿ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು), ಡಾ.ಎಂ.ಎ.ಸಲೀಮ್ (ಡಿಜಿಪಿ, ಸಿಐಡಿ) ಮತ್ತು ಕೆ .ರಾಮಚಂದ್ರ ರಾವ್ . ಆದಾಗ್ಯೂ, ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ರಾವ್ ಭಾಗಿಯಾಗಿದ್ದಾರೆ ಎಂಬ ಆರೋಪದ ಮೇಲೆ ಸರ್ಕಾರ ಅವರನ್ನು ಕಡ್ಡಾಯ ರಜೆಯ ಮೇಲೆ ಇರಿಸಿತು, ಹೀಗಾಗಿ ಪ್ರಶಾಂತ್ ಕುಮಾರ್ ಮತ್ತು ಸಲೀಂ ಹೆಸರು ಮುಂಚೂಣಿಯಲ್ಲಿತ್ತು.
ಬಿಹಾರ ಮೂಲದ ಪ್ರಶಾಂತ್ ಕುಮಾರ್ ಠಾಕೂರ್ 1992ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದು, ಡಿಜಿಪಿಯಾಗಲು ಡಿಜಿ- ಐಜಿಪಿ ದರ್ಜೆಯಲ್ಲಿ ರಾಜ್ಯದಲ್ಲಿ ಕನಿಷ್ಠ ಎರಡು ವರ್ಷ ಸೇವಾನುಭವ ಹೊಂದಿರಬೇಕೆಂಬ ನಿಯಮ ಇದೆ. ಪ್ರಶಾಂತ್ ಕುಮಾರ್ ಸಲೀಂ ಅವರಿಗಿಂತ ಒಂದು ವರ್ಷ ಹೆಚ್ಚು ಸೇವಾ ಹಿರಿತನ ಹೊಂದಿದ್ದಾರೆ. ಬೆಂಗಳೂರಿನ ಚಿಕ್ಕಬಾಣಾವರದ ನಿವಾಸಿ ಕನ್ನಡಿಗರೇ ಆಗಿರುವ ಎಂ.ಎ.ಸಲೀಂ 1993ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿದ್ದಾರೆ. ಸಲೀಂ ಮುಂದಿನ ವರ್ಷ ಜೂನ್ ವೇಳೆಗೆ ನಿವೃತ್ತರಾಗಲಿದ್ದು, 13 ತಿಂಗಳ ಕಾಲ ಡಿಜಿಪಿಯಾಗಿ ಕರ್ತವ್ಯದಲ್ಲಿ ಇರಲಿದ್ದಾರೆ. ಕಲಬುರಗಿಯಲ್ಲಿ ಎಎಸ್ಪಿ, ಆ ಬಳಿಕ ಕುಶಾಲನಗರದಲ್ಲಿ ಎಎಸ್ಪಿಯಾಗಿ ಕರ್ತವ್ಯ ಆರಂಭಿಸಿ, 1998ರಲ್ಲಿ ಉಡುಪಿಯಲ್ಲಿ ಎಸ್ಪಿ ಆಗುವ ಮೂಲಕ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ 30 ವರ್ಷಗಳ ಕಾಲ ಸೇವಾನುಭವ ಹೊಂದಿದ್ದಾರೆ.





