ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಸ್ಥಾಪನೆ, ಮುಷ್ಟಿ ಕಾಣಿಕೆ ಸಮರ್ಪಣೆ
ಉಡುಪಿ: ಅನೇಕ ದೇವಸ್ಥಾನಗಳಿರುವ ಉಡುಪಿ, ದ.ಕ ಜಿಲ್ಲೆಯನ್ನು ದೇವರನಾಡೆಂದು ಹೇಳಬಹುದು. ಪಾಜಕ ಕ್ಷೇತ್ರ, ದುರ್ಗಾದೇವಿ ಸನ್ನಿಧಾನ, ಪರಶುರಾಮ ಸನ್ನಿಧಾನವನ್ನು ಸುತ್ತುವರಿಯುವ ಮೂಲಕ ಕಟಪಾಡಿ ಏಣಗುಡ್ಡೆಯ ಪಂಪಾ ಕ್ಷೇತ್ರದ ಅಯ್ಯಪ್ಪ ಸ್ವಾಮಿ ಮಂದಿರ ಪಾವಿತ್ರ್ಯ ತರುವ ಸಾನ್ನಿಧ್ಯವಾಗಲಿದೆ. ಹಿಂದೂ ಧರ್ಮದ ಉಳಿವಿನೊಂದಿಗೆ ಯುವಕರಲ್ಲಿ ಧಾರ್ಮಿಕ ಪ್ರಜ್ಞೆ ಮೂಡಿಸುವಲ್ಲಿ ಅಯ್ಯಪ್ಪ ಸ್ವಾಮಿ ವೃತವು ಕಾರಣವಾಗಿದೆ ಎಂದು ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.
ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ವತಿಯಿಂದ ಏಣಗುಡ್ಡೆ ಕುರ್ಕಾಲು ರಸ್ತೆಯ ರಿಶಾಲ್ ನಗರದ ಪಂಪಾ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುವ ಕರ್ನಾಟಕದಲ್ಲಿಯೇ ಪ್ರಪ್ರಥಮ ಸಂಪೂರ್ಣ ಅಮೃತ ಶಿಲಾಮಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶಿಲಾನ್ಯಾಸ, ನಿಧಿಕುಂಭ ಸ್ಥಾಪನೆ,ಮುಷ್ಟಿ ಕಾಣಿಕೆ ಸಮರ್ಪಣೆ ಕಾರ್ಯಕ್ರಮ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಭಾನುವಾರ ಆಶೀರ್ವಚನ ನೀಡಿದರು.
ಕಟಪಾಡಿಯ ಅಯ್ಯಪ್ಪನ ಭಕ್ತರುಮಾಲಾಧಾರಿಗಳಾಗಿ 40 ವರ್ಷಗಳ ನಂತರ ಸುಮಾರು 5 ಕೋಟಿ ವೆಚ್ಚದ ನೂತನ ದೇವಳ ನಿರ್ಮಿಸಲು ಸಂಕಲ್ಪಿಸಿದ್ದಾರೆ. ಅವರ ದೇವಳ ನಿರ್ಮಾಣದ ಕನಸು ನನಸಾಗಲಿ ಎಂದರು. ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್, ಅದಾನಿ ಸಮೂಹದ ಅಧ್ಯಕ್ಷರಾದ ಕಿಶೋರ್ ಆಳ್ವ, ಕಾಪು ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಾಸುದೇವ ಶೆಟ್ಟಿ ಮಾತನಾಡಿದರು.
ದೇವಸ್ಥಾನ ನಿರ್ಮಿಸಲು 30 ಸೆಂಟ್ಸ್ ನಿವೇಶನವನ್ನು ದಾನವಾಗಿ ನೀಡಿರುವ ಯುವ ಉದ್ಯಮಿ ರಿಶಾನ್ ಟಿ ಮತ್ತು ಪ್ರಮೀಳಾ ದಂಪತಿಯನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಗೀತಾಂಜಲಿ ಸುವರ್ಣ, ಚಂದ್ರಹಾಸ ಗುರುಸ್ವಾಮಿ ಮುಂಬೈ, ಪ್ರಮುಖರಾದ ರಾಘು ಪೂಜಾರಿ ಕಲ್ಮಂಜೆ, ದಯಾನಂದ ವಿ ಬಂಗೇರ, ಪಳ್ಳಿ ಲಕ್ಮೀನಾರಾಯಣ ಹೆಗ್ಡೆ, ಶಶಿಧರ ವಾಗ್ಳೆ, ಶಶಿಧರ ಶೆಟ್ಟಿ ಮುಂಬೈ, ಯೋಧ ಸಚಿನ್ ಕರ್ಕೇರ ಪೆರ್ಡೂರು, ರಾಧಾಕೃಷ್ಣ ಮೆಂಡನ್, ನವೀನ್ ಅಮೀನ್ ಶಂಕರಪುರ, ಶಿವಪ್ರಸಾದ್ ಕಟಪಾಡಿ, ಸಂತೋಷ್ ಸುವರ್ಣ ಬೊಳ್ಜೆ, ರಾಜೇಶ್ ಮಸ್ಕತ್, ಭುವನ್ ಪಡುಕರೆ, ಕಟಪಾಡಿ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಗುರುಸ್ವಾಮಿ ಸುರೇಶ್ ಜತ್ತನ್ ಕಟಪಾಡಿ, ಅಯ್ಯಪ್ಪ ದೇಗುಲ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ರಿಶಾನ್ ಟಿ ಕಟಪಾಡಿ, ಕಾರ್ಯಾಧ್ಯಕ್ಷ ಕೇಶವ ಕುಂದರ್ ಕೊಡವೂರು, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಜಿ.ಸನಿಲ್ ಅಚ್ಚಡ ಕಟಪಾಡಿ ಮತ್ತಿತರರು ಉಪಸ್ಥಿತರಿದ್ದರು. ಕ್ಷೇತ್ರದ ತಂತ್ರಿಗಳಾದ ಪ್ರಕಾಶ ವಿ. ಹೊಳ್ಳ ಶಕ್ತಿನಗರ ಮಂಗಳೂರು ಇವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಿತು. ಅಭಿಷೇಕ್ ಕರ್ಕೇರ ಪ್ರಾರ್ಥಿಸಿದರು. ಪ್ರಕಾಶ್ ಸುವರ್ಣ ಕಟಪಾಡಿ ಸ್ವಾಗತಿಸಿ,ವಂದಿಸಿದರು.





