ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ- ಶ್ರೀನಗರದಲ್ಲಿ ಭಾರಿ ಸ್ಪೋಟ!
ಶ್ರೀನಗರ: ಭಾರತ – ಪಾಕ್ ನಡುವೆ ಕದನ ವಿರಾಮವಾದ ಕೆಲವೇ ಗಂಟೆಗಳಲ್ಲಿ ಪಾಕಿಸ್ಥಾನದಿಂದ ಕದನ ವಿರಾಮದ ಉಲ್ಲಂಘನೆ ಆಗಿದೆ ಎಂದು ವರದಿಯಾಗಿದೆ.
ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶನಿವಾರ ಸಂಜೆಯ ವೇಳೆ ಪಾಕಿಸ್ಥಾನ ಡೋನ್ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಜಮ್ಮುವಿನ ಪಲನ್ವಾಲ್ಲಾ ಸೆಕ್ಟರ್ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಒಸಿ) ಪಾಕಿಸ್ಥಾನ ಕದನ ವಿರಾಮವನ್ನು ಉಲ್ಲಂಘಿಸಿದೆ. ಜಮ್ಮು ಮತ್ತು ಅನ್ನೂರ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ಹಲವಾರು ನಗರಗಳಲ್ಲಿ ಡೋನ್ ದಾಳಿ ನಡೆದಿದೆ ಎಂದು ಸುದ್ದಿ ವರದಿಗಳು ತಿಳಿಸಿವೆ.
ಅನ್ನೂರ್, ರಾಜೇರಿ, ಆರ್ಎಸ್ ಪುರ, ಉದಮ್ಪುರ್ ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಶೆಲ್ ದಾಳಿ ನಡೆಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ 11 ಸ್ಥಳಗಳಲ್ಲಿ ಪಾಕ್ ಡೋನ್ ದಾಳಿ ನಡೆದಿದೆ.
ಬಾರಾಮುಲ್ಲಾದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟಗಳು ಸಂಭವಿಸಿರುವುದು ವರದಿಯಾಗಿವೆ. ಶ್ರೀನಗರ ಮಾತ್ರವಲ್ಲದೆ ಗುಜರಾತ್, ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಪಾಕ್ ಡೋನ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.
ಪಾಕಿಸ್ತಾನದ ಹಲವು ಡೋನ್ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ರಾಜಸ್ಥಾನದ ಪೋಗ್ರಾನ್ ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಡೋನ್ ನ್ನು ಹೊಡೆದುರುಳಿಸಲಾಗಿದೆ. ಪಾಕ್ ಹುಚ್ಚುತನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಸರ್ಕಾರ ಸೇನೆಗೆ (ಬಿಎಸ್ಎಫ್) ಸೂಚನೆ ನೀಡಿದೆ.

ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆಯಾದ ಕುರಿತು ಜಮ್ಮು – ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ಟ್ವಿಟ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕದನ ವಿರಾಮಕ್ಕೆ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಸದ್ದು ಕೇಳಿಬಂತು! ಎಂದು ಟ್ವಿಟ್ ಮಾಡಿದ್ದಾರೆ.
ಸಂಜೆ 5ಕ್ಕೆ ಕದನ ವಿರಾಮ:
ಪಹಲ್ಲಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯ ಅಪರೇಷನ್ ಸಿಂದೂರಕ್ಕೆ ಕಂಗೆಟ್ಟು ಹೋಗಿದ್ದ ಪಾಕಿಸ್ಥಾನ ಕೊನೆಗೂ ಕದನವಿರಾಮಕ್ಕಾಗಿ ಭಾರತದ ಜತೆ ಗೋಗರೆದಿದ್ದು, ಅದರಂತೆ ಉಭಯ ದೇಶಗಳ ನಡುವಿನ ನೇರ ಮಾತುಕತೆಯಂತೆ ಇಂದು ಸಂಜೆ 5ಗಂಟೆಯಿಂದ ಕದನ ವಿರಾಮಕ್ಕೆ ಸಮ್ಮತಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿತ್ತು.
ಮೇ 12ರಂದು ಮಾತುಕತೆ:
ಕದನ ವಿರಾಮ ಹಿನ್ನೆಲೆಯಲ್ಲಿ ಭಾರತ ಮತ್ತು ಪಾಕಿಸ್ತಾನದ ಡಿಜಿಎಂಒಗಳ ನಡುವೆ ಮಾತುಕತೆ ನಡೆಯಲಿದೆ ಎಂದು ಭಾರತ ತಿಳಿಸಿದೆ.





