ಐಎಂಎ ಹಗರಣ: ಮಾಜಿ ಶಾಸಕ ರೋಷನ್ ಬೇಗ್ ಬಂಧನ

ಬೆಂಗಳೂರು: ಐಎಂಎ ಕಂಪನಿಯ ಸಂಸ್ಥಾಪಕ ಮನ್ಸೂರ್‌ ಖಾನ್‌ ಒತ್ತಡದಿಂದಾಗಿ ಸಿಬಿಐ ಇಂದು ಮಾಜಿ ಮಂತ್ರಿ, ಶಿವಾಜಿ ನಗರದ ಮಾಜಿ ಶಾಸಕ ರೋಷನ್‌ ಬೇಗ್‌ ಅವರನ್ನು ಬಂಧಿಸಿದೆ. ಕೋರ್ಟ್‌ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.

ಐಎಂಎಯಿಂದ ಹೂಡಿಕೆದಾರರಿಗೆ ಬಹುಕೋಟಿ  ವಂಚನೆ ಪ್ರಕರಣದಲ್ಲಿ ರೋಷನ್ ಬೇಗ್ ಅವರ ಹೆಸರು  ಕೇಳಿಬಂದಿತ್ತು. ಐಎಂಎ ಅಧ್ಯಕ್ಷ ಮನ್ಸೂರ್ ಖಾನ್ ನಿಂದ ನೂರಾರು ಕೋಟಿ ರೂಪಾಯಿಯನ್ನು ರೋಷನ್ ಬೇಗ್ ಪಡೆದುಕೊಂಡಿದ್ದಾರೆ ಎಂಬ ಆರೋಪವಿದೆ.  ಹಣವಷ್ಟೇ ಅಲ್ಲ, ಐಷಾರಾಮಿ ಕಾರುಗಳೂ ಸೇರಿದಂತೆ ಇನ್ನಿತರ ದುಬಾರಿ ಬೆಲೆಯ ಉಡುಗೊರೆಗಳನ್ನೂ ರೋಷನ್ ಬೇಗ್ ಪಡೆದಿದ್ದಾರೆ ಎಂಬ ಆರೋಪವಿದೆ.

ಗ್ರಾಹಕರಿಗೆ ವಂಚನೆ ಹೇಗೆ?
ಐಎಂಎ ಜ್ಯುವೆಲ್ಸ್ ಚಿನ್ನ ಖರೀದಿಸುವ ಗ್ರಾಹಕರಿಗೆ ಮೇಕಿಂಗ್ ಹಾಗೂ ವೇಸ್ಟೇಜ್ ಶುಲ್ಕ ವಿಧಿಸುತ್ತಿರಲಿಲ್ಲ. ಈ ಪ್ರಕಟಣೆ ನೋಡಿ ಜನ ಚಿನ್ನ ಖರೀದಿ ಮಾಡುತ್ತಿದ್ದರು. ಖರೀದಿಗೆ ಬಂದ ಗ್ರಾಹಕರಿಗೆ ಕಂಪನಿಯಲ್ಲಿ ಹಣ ಹೂಡುವಂತೆ ಸಿಬ್ಬಂದಿ ಪುಸಲಾಯಿಸುತ್ತಿದ್ದರು. ಜ್ಯುವೆಲ್ಸ್ ಸಿಬ್ಬಂದಿಯ ಮಾತಿಗೆ ಮರುಳಾದ ಜನ ತಮ್ಮಲ್ಲಿದ್ದ ಹಣವನ್ನು ಹೂಡಿಕೆ ಮಾಡುತ್ತಿದ್ದರು. 1 ಲಕ್ಷಕ್ಕೆ 3 ಸಾವಿರ ರೂ. ನಂತೆ ಕಂಪನಿ ಬಡ್ಡಿ ನೀಡುತಿತ್ತು. ಕಂಪನಿ ಸರಿಯಾದ ಸಮಯದಲ್ಲಿ ಲಾಭಾಂಶ ನೀಡುತ್ತಿದ್ದ ಕಾರಣ ವಿಶ್ವಾಸಾರ್ಹತೆ ಗಳಿಸಿಕೊಂಡಿತ್ತು.

ಲಾಭಾಂಶ ಪಡೆದ ಗ್ರಾಹಕರು ಸ್ನೇಹಿತರಿಗೆ ಹೇಳುತ್ತಿದ್ದ ಕಾರಣ ಅವರು ಹೂಡಿಕೆ ಮಾಡತೊಡಗಿದರು. ಭಾರೀ ಪ್ರಚಾರ ಸಿಕ್ಕಿದ ಪರಿಣಾಮ ಹೂಡಿಕೆ ಹೆಚ್ಚಾಯಿತು. ಆದರೆ 2019ರ ಏಪ್ರಿಲ್, ಮೇ ತಿಂಗಳಿನಲ್ಲಿ ಸಂಸ್ಥೆ ಬಡ್ಡಿ ನೀಡಿರಲಿಲ್ಲ. ಈ ನಡುವೆ ಜೂನ್ 10 ರಂದು ಸಂಪೂರ್ಣ ಹಣ ನೀಡುವುದಾಗಿ ಭರವಸೆ ನೀಡಿತ್ತು. ಆದರೆ ಜೂ.9 ರಂದು ಮಾಲೀಕ ಮನ್ಸೂರ್ ಅಲಿ ಖಾನ್ ಆತ್ಮಹತ್ಯೆಯ ವಿಡಿಯೋ ವೈರಲ್ ಆದ ಬಳಿಕ ಮಳಿಗೆಯ ಮುಂದೆ ಜನರು ಜಮಾಯಿಸಿ ಹೂಡಿದ್ದ ಹಣವನ್ನು ಕೇಳಲು ಆರಂಭಿಸಿದ್ದರು. 

ಈ ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದ ಕೂಡಲೇ  ಕಾಂಗ್ರೆಸ್ ಪಕ್ಷ  ಹಾಗೂ ಶಿವಾಜಿನಗರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರೋಷನ್ ಬೇಗ್, ಬಿಜೆಪಿ ಸೇರ್ಪಡೆಯಾಗಲು ಮುಂದಾಗಿದ್ದರು. ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುವ ಕಾರಣಕ್ಕಾಗಿಯೇ ಅವರು ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂಬ ಆರೋಪ ಕೂಡಾ ಕೇಳಿಬಂದಿತ್ತು. 

ಆದರೆ, ಟಿಕೆಟ್ ನೀಡದೆ ಕೈಕೊಟ್ಟ ಬಿಜೆಪಿ ನಿಲುವಿನಿಂದ ಬೇಸತ್ತು ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧೆ ಮಾಡುವುದಾಗಿ ಹೇಳಿದ್ದ ಶಾಸಕ ರೋಷನ್ ಬೇಗ್ ಚುನಾವಣಾ ಕಣದಿಂದ ಹಿಂದೆ ಸರಿದಿದ್ದರು.

Leave a Reply

Your email address will not be published. Required fields are marked *

error: Content is protected !!