ಶಸ್ತ್ರಚಿಕಿತ್ಸೆಗೆ ಆಯುರ್ವೇದ ವೈದ್ಯರಿಗೆ ಅನುಮತಿ
ನವದೆಹಲಿ: ಸರಿಯಾದ ತರಬೇತಿ ಪಡೆದು ಕೆಲವು ಶಸ್ತ್ರಚಿಕಿತ್ಸೆಗಳನ್ನು ನಡೆಸಲು, ಸ್ನಾತಕೋತ್ತರ ಪದವಿ ಪಡೆದ ಆಯುರ್ವೇದ ವೈದ್ಯರಿಗೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಪೆಂಡಿಕ್ಸ್, ಪಿತ್ತಕೋಶ, ಹಾನಿಕಾರಕವಲ್ಲದ ಗೆಡ್ಡೆ ತೆಗೆಯುವುದು, ಗ್ಯಾಂಗ್ರಿನ್, ಹಲ್ಲಿನ ರೂಟ್ಕ್ಯಾನಲ್ ಮುಂತಾದ ಸಾಮಾನ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ತರಬೇತಿಯನ್ನು ಪಡೆದ ನಂತರ, ಆಯುರ್ವೇದ ವೈದ್ಯರು ಸಹ ಇಂಥ ಶಸ್ತ್ರಚಿಕಿತ್ಸೆಗಳನ್ನು ನಡೆಸಬಹುದಾಗಿದೆ. ‘ಆಯುರ್ವೇದದಲ್ಲಿ ಶಲ್ಯತಂತ್ರ (ಸಾಮಾನ್ಯ ಶಸ್ತ್ರಚಿಕಿತ್ಸೆ) ಅಧ್ಯಯನ ನಡೆಸುವವರಿಗೆ 39 ರೀತಿಯ ಶಸ್ತ್ರಚಿಕಿತ್ಸೆ ಹಾಗೂ ಶಾಲಾಕ್ಯತಂತ್ರ (ಕಣ್ಣು, ಮೂಗು ಗಂಟಲು, ತಲೆ ಹಾಗೂ ದಂತ ಚಿಕಿತ್ಸೆ) ಸ್ನಾತಕೋತ್ತರ ಅಧ್ಯಯನ ಮಾಡುವವರಿಗೆ 19 ರೀತಿಯ ಶಸ್ತ್ರಚಿಕಿತ್ಸೆ ನಡೆಸುವ ತರಬೇತಿಯನ್ನು ನೀಡಲಾಗುವುದು. ಪದವಿ ಪೂರ್ಣಗೊಂಡ ನಂತರ ಅವರು ಸ್ವತಂತ್ರವಾಗಿ ಈ ಚಿಕಿತ್ಸೆಗಳನ್ನು ನಡೆಸಬಹುದು’ ಎಂದು ಭಾರತೀಯ ವೈದ್ಯಕೀಯ ಮಂಡಳಿ ಹೇಳಿದೆ. ಅನೇಕ ರಾಜ್ಯಗಳಲ್ಲಿ ಗ್ರಾಮೀಣ ಪ್ರದೇಶ ಹಾಗೂ ಸಣ್ಣ ನಗರಗಳಲ್ಲಿ ತಜ್ಞ ವೈದ್ಯರು ಹಾಗೂ ಶಸ್ತ್ರಚಿಕಿತ್ಸಕರ ಕೊರತೆ ತೀವ್ರವಾಗಿದೆ. 2015ರಲ್ಲಿ ಕೇಂದ್ರದ ಆರೋಗ್ಯ ಸಚಿವಾಲಯವು ಸಿದ್ಧಪಡಿಸಿದ್ದ ಆರೋಗ್ಯ ಸೇವೆ ಕುರಿತ ವರದಿಯಲ್ಲಿ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಒಟ್ಟಾರೆ ಮಂಜೂರಾಗಿರುವ ಶಸ್ತ್ರಚಿಕಿತ್ಸಕರ ಹುದ್ದೆಗಳಲ್ಲಿ ಶೇ 74.6ರಷ್ಟು ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗಿತ್ತು. ಐಎಂಎ ಖಂಡನೆ ಕೇಂದ್ರದ ಈ ನಿರ್ಧಾರವನ್ನು ಭಾರತೀಯ ವೈದ್ಯಕೀಯ ಸಂಘವು (ಐಎಂಎ) ಖಂಡಿಸಿದೆ. ‘ಇದು ಭಾರತದ ವೈದ್ಯಕೀಯ ವ್ಯವಸ್ಥೆಯನ್ನೇ ಭ್ರಷ್ಟಗೊಳಿಸುವ ಕ್ರಮ’ ಎಂದು ಸಂಘ ಟೀಕಿಸಿದೆ. ‘ಎರಡು ವೈದ್ಯ ಪದ್ಧತಿಗಳ ಮಿಶ್ರಣವನ್ನು ಯಾವುದೇ ಬೆಲೆ ತೆತ್ತಾದರೂ ವಿರೋಧಿಸಲಾಗುವುದು. ದೇಶದಾದ್ಯಂತ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಇದರ ವಿರುದ್ಧ ಪ್ರತಿಭಟನೆ ನಡೆಸುವರು. ಇಂಥ ಅಡ್ಡದಾರಿಗಳನ್ನು ರೂಪಿಸುವುದಾದರೆ, ‘ನೀಟ್’ನ ಔಚಿತ್ಯವಾದರೂ ಏನು’ ಎಂದು ಸಂಘ ಪ್ರಶ್ನಿಸಿದೆ. |