ರಾಜ್ಯದಲ್ಲಿ ಶೀಘ್ರವೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ ?
ಬೆಂಗಳೂರು: ರಾಜ್ಯದೆಲ್ಲೆಡೆ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಕೂಗುಗಳು ಕೇಳಿ ಬರುತ್ತಿರುವ ನಡುವಲ್ಲೇ, ಗೋಹತ್ಯೆ ನಿಷೇಧ ಮಾಡಲು ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ ಎಂದು ರಾಜ್ಯ ಬಿಜೆಪಿ ಶುಕ್ರವಾರ ಹೇಳಿದೆ.
ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರುವುದಾಗಿ ಪಶುಸಂಗೋಪನೆ, ಹಜ್ ವಕ್ಫ್ ಇಲಾಖೆ ಸಚಿವ ಪ್ರಭು ಚವ್ಹಾಣ ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ಅವರು, ಗೋವು ದೇಶದ ಸಂಪತ್ತು. ಗೋವುಗಳ ರಕ್ಷಣೆ ಮಾಡಬೇಕಾದದ್ದು ಸರ್ಕಾರದ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಈ ಕಾನೂನು ಜಾರಿಗೆ ತರುವ ಸಿದ್ದತೆ ನಡೆಯುತ್ತಿದೆ. ಗೋ ಹತ್ಯೆ ನಿಷೇಧ ಕಾಯಿದೆ ನಮ್ಮ ಅಜೆಂಡಾವಾಗಿದ್ದು, ಶೀಘ್ರದಲ್ಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯಿದೆ ನೂರಕ್ಕೆ ನೂರರಷ್ಟು ಜಾರಿಗೆ ತರಲಾಗುವುದು ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬದ್ಧವಾಗಿದೆ. ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ಈಗಾಗಲೇ ಸರ್ಕಾರಕ್ಕೆ ಈ ಕುರಿತು ಸಲಹೆ ನೀಡಿದ್ದಾರೆ. ಇದರ ಬಗ್ಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿಯವರೂ ಕೂಡ ಸಚಿವ ಪ್ರಭು ಚೌಹಾಣ್ ಜೊತೆಗೆ ಚರ್ಚೆ ನಡೆಸಿದ್ದಾರೆಂದು ತಿಳಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ ಗೋ ಹತ್ಯೆ ನಿಷೇಧ ಜಾರಿಗೊಳಿಸಲು ಬಿಜೆಪಿ ಸರ್ಕಾರ ಈಗಾಗಲೇ ಸಮಿತಿ ರಚಿಸಿದೆ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ. ಮುಂದಿನ ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸಲು ಸರ್ಕಾರ ಮಸೂದೆ ಮಂಡಿಸಲಿದೆ. ರಾಜ್ಯದ ಜನತೆಯ ಅಪೇಕ್ಷೆ ಶೀಘ್ರದಲ್ಲೇ ನೆರವೇರಲಿದೆ ಎಂದು ಹೇಳಿದೆ. ಸಿಟಿ ರವಿಯವರು ಟ್ವೀಟ್ ಮಾಡಿ, ಶೀಘ್ರದಲ್ಲೇ ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಯಾಗಲಿದೆ. ಮುಂದಿನ ಅಧಿವೇಶನದಲ್ಲಿ ಗೋವುಗಳ ಕಳ್ಳತನ, ಹತ್ಯೆ ನಿಷೇಧ ಕಾಯ್ದೆಗಳು ಜಾರಿಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಪ್ರಭು ಚೌಹಾಣ್ ಜೊತೆಗೂ ಮಾತುಕತೆ ನಡೆಸಲಾಗಿದೆ ಎಂದಿದ್ದಾರೆ