ಕಾರ್ಕಳ: ರಾಷ್ಟ್ರೀಯ ಪತ್ರಿಕಾ ದಿನಾಚರಣೆ – ಸಾಧಕರಿಗೆ ಪ್ರಶಸ್ತಿ
ಕಾರ್ಕಳ: ಪತ್ರಿಕಾ ರಂಗದಲ್ಲಿ ಉಂಟಾದ ಆರ್ಥಿಕ ಸಮಸ್ಯೆ, ಬಂಡವಾಳ ಶಾಹಿಗಳ ಹಿಡಿತ, ರಾಜಕೀಯ ದೃಷ್ಟಿಕೋನಗಳಿಂದಾಗಿ ಪತ್ರಿಕಾರಂಗದ ಅಂತರ್‌ಶಕ್ತಿ ಕುಂದುತ್ತಿದೆ. ವ್ಯವಹಾರಿಕ ಜಗತ್ತಿನಲ್ಲಿ ಪತ್ರಿಕಾ ರಂಗದ ಮೌಲ್ಯವನ್ನು ಕಡಿಮೆ ಮಾಡುವ ಸಂಗತಿಗಳು ನೂರಾರು ಇವೆ ಎಂದು ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್ ಹೇಳಿದರು
ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
‘ಮೌಲ್ಯಗಳ ಜತೆಗೆ ಗುದ್ದಾಡುವಾಗ ಶ್ರೇಷ್ಠತೆ ಒರಗೆ ಹಚ್ಚಿ ನೋಡಬೇಕಾಗುತ್ತದೆ. ಸಾಮಾಜಿಕ ಜಾಲತಾಣಗಳಿಂದ ಹಾಗೂ ನಿರಂತರ ಸುದ್ದಿ ಮಾಹಿತಿ ಒದಗಿಸುವ ಸುದ್ದಿ ಜಾಲಗಳ ನಡುವೆ ಪತ್ರಿಕೆ ನಿರ್ವಹಣೆಯು ಅತ್ಯಂತ ನಿಖರ ಹಾಗೂ ವಿಶ್ವಾಸರ್ಹ ಮೂಡಿಸುವುದು ಅಗತ್ಯ’ ಎಂದು ಅವರು ಹೇಳಿದರು.
‘ರಾಜಕೀಯ ವಿಚಾರಕ್ಕೆ ಪತ್ರಿಕಾ ರಂಗವು ಹೆಚ್ಚಿನ ಮಹತ್ವ ನೀಡುತ್ತಾ ಬಂದಿದ್ದರೂ, ಸಮಾಜದ ಅಂತರ್‌ಶಕ್ತಿ ಪ್ರತಿಬಿಂಬಿತವಾಗುವ ಶಕ್ತಿಯನ್ನು ಹೊರಹಾಕುತ್ತಿವೆ. ಸಿದ್ಧಾಂತಗಳಿಗೆ ಬದ್ಧತೆ ಹೊಂದಿರುವ ಪತ್ರಿಕೆಗಳು ದೇಶದ ಇತಿಹಾಸ, ಮೌಲ್ಯಗಳಿಗೆ ಹೆಚ್ಚು ಒತ್ತು ನೀಡಬೇಕೆಂಬ ನಿಲುವು ಅಗತ್ಯವಾಗಿದೆ. ಪತ್ರಿಕಾ ಕ್ಷೇತ್ರವನ್ನು ನಾಲ್ಕನೇ ಅಂಗ ಎಂದು ಪರಿಗಣಿಸಿದರೂ, ಸಂವಿಧಾನ ನೀಡದ ಸ್ಥಾನಮಾನವನ್ನು ಜನಮಾನಸ ನೀಡಿದೆ’ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಹೋರಾಟಗಾರ ಜಯನ್ ಮಲ್ಪೆ ಅವರಿಗೆ ಜನದನಿ ಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಸುಮಿತ್ ಶೆಟ್ಟಿ ಬೈಲೂರು ಅವರಿಗೆ ಜಾಗೃತಿ ಸಿರಿ ಪ್ರಶಸ್ತಿ, ನಿವೃತ್ತ ಆರೋಗ್ಯಾಧಿಕಾರಿ ಎಂ. ಸುಂದರ ಪೂಜಾರಿ ಅವರಿಗೆ ಸೇವಾ ಸಿರಿ ಪ್ರಶಸ್ತಿ, ಏಕಲವ್ಯ ಪ್ರಶಸ್ತಿ ಪುರಸ್ಕೃತೆ ಅಕ್ಷತಾ ಬೋಳ ಅವರಿಗೆ ವಿಕ್ರಮ ಸಿರಿ ಪ್ರಶಸ್ತಿ, ಸಮಾಜ ಸೇವಕ ಮಹಮ್ಮದ್ ಶರೀಫ್ ಅವರಿಗೆ ಕಾಯಕ ಸಿರಿ ಪ್ರಶಸ್ತಿ, ಚಿತ್ರಕಲಾವಿದ ವಿಜಯ ಪರವ ಅವರಿಗೆ ವರ್ಣ ಸಿರಿ ಪ್ರಶಸ್ತಿ ಹಾಗೂ ಪತ್ರಿಕಾ ವಿತರಕ ಸಾಣೂರು ಸತೀಶ್ ಪೈ, ದಿವಾಕರ ಆಚಾರ್ಯ ದುರ್ಗಾ ಅವರಿಗೆ ಶ್ರಮ ಸಿರಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಜಯನ್ ಮಲ್ಪೆ, ಸುಂದರ ಪೂಜಾರಿ, ಸುಮಿತ್ ಬೈಲೂರು ಮಾತನಾಡಿದರು. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು.
ಉದ್ಯಮಿ ಮಹಮ್ಮದ್ ಗೌಸ್, ನಲ್ಲೂರು ಕೃಷ್ಣ ಶೆಟ್ಟಿ, ಕಾರ್ಕಳ ಪುರಸಭಾ ಮಾಜಿ ಕೌನ್ಸಿಲರ್ ಪಾರ್ಶ್ವನಾಥ ವರ್ಮ, ಸಾಮಾಜಿಕ ಕಾರ್ಯಕರ್ತ ಆಗಸ್ಟಿನ್, ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ನಾಯಕ್ ಸಾಣೂರು ಇದ್ದರು. ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಆರ್.ಬಿ. ಜಗದೀಶ್ ಸ್ವಾಗತಿಸಿದರು.
ಕೋಶಾಧಿಕಾರಿ ವಿಲಾಸ ಕುಮಾರ್ ನಿಟ್ಟೆ ವಂದಿಸಿದರು. ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಮೊಹಮದ್ ಶರೀಫ್ ನಿರೂಪಿಸಿದರು.