ಆಡಳಿತದಲ್ಲಿ ಹಸ್ತಕ್ಷೇಪ ಬಿ.ವೈ. ವಿಜಯೇಂದ್ರ ವಿರುದ್ಧ ರಾಜ್ಯಪಾಲರಿಗೆ ದೂರು

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಮಗ ಬಿ.ವೈ. ವಿಜಯೇಂದ್ರ ಅಸಾಂವಿಧಾನಿಕ ರೀತಿಯಲ್ಲಿ ರಾಜ್ಯ ಸರ್ಕಾರದ ಮೇಲೆ ಹಿಡಿತ ಸಾಧಿಸಿ, ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ರಾಜ್ಯಪಾಲರಿಗೆ ದೂರು ಸಲ್ಲಿಸಿರುವ ಜನ ಸಾಮಾನ್ಯರ ಪಕ್ಷ, ಈ ಕುರಿತು ತನಿಖೆಗೆ ಆದೇಶಿಸುವಂತೆ ಆಗ್ರಹಿಸಿದೆ.

‘ಯಡಿಯೂರಪ್ಪ ಅವರು ಸರ್ಕಾರದ ಮೇಲೆ ಹಿಡಿತ ಕಳೆದುಕೊಂಡಿದ್ದಾರೆ. ಅವರ ಸಂಪುಟದ ಸದಸ್ಯರೂ ದುರ್ಬಲರಾಗಿದ್ದಾರೆ. ಎಲ್ಲ ಇಲಾಖೆಗಳಲ್ಲೂ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿದ್ದಾರೆ. ಅವರ ಆಣತಿಯಂತೆ ಆಡಳಿತ ನಡೆಯುತ್ತಿದೆ. ವಿಜಯೇಂದ್ರ ‘ಪರ್ಯಾಯ ಮುಖ್ಯಮಂತ್ರಿ’ ಎಂಬಂತೆ ಕೆಲಸ ಮಾಡುತ್ತಿದ್ದಾರೆ’ ಎಂದು ಜನ ಸಾಮಾನ್ಯರ ಪಕ್ಷದ ಅಧ್ಯಕ್ಷ ಯಲ್ಲಪ್ಪ ಹೆಗಡೆ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರಿಗೆ ಗುರುವಾರ ಸಲ್ಲಿಸಿರುವ ದೂರಿನಲ್ಲಿ ಆಪಾದಿಸಿದ್ದಾರೆ.

ಶಿರಾ ಕ್ಷೇತ್ರದ ಉಪ ಚುನಾವಣೆ ಸಂದರ್ಭದಲ್ಲಿ ವಿಜಯೇಂದ್ರ ನೀಡಿದ್ದ ಭರವಸೆಯಂತೆ ‘ಕಾಡುಗೊಲ್ಲ ಅಭಿವೃದ್ಧಿ ನಿಗಮ’ ಸ್ಥಾಪಿಸಲಾಗಿದೆ. ಈಗ ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮತ್ತು ವೀರಶೈವ– ಲಿಂಗಾಯತ ಅಭಿವೃದ್ಧಿ ನಿಗಮಗಳ ಸ್ಥಾಪನೆಯ ನಿರ್ಧಾರವೂ ವಿಜಯೇಂದ್ರ ನೀಡಿದ್ದ ಭರವಸೆಗೆ ಪೂರಕವಾಗಿ ಹೊರಬಿದ್ದಿದೆ. ಇದು ಅವರು ರಾಜ್ಯ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದಕ್ಕೆ ಸಾಕ್ಷಿ ಎಂದು ಆರೋಪಿಸಿದ್ದಾರೆ.

‘ಯಡಿಯೂರಪ್ಪ ಅವರ ಸಂಪುಟದ ಎಲ್ಲ ಸದಸ್ಯರು ವಿಜಯೇಂದ್ರ ಅವರ ಭಯದಲ್ಲಿ ಕೆಲಸ ಮಾಡುತ್ತಿದ್ದಾರೆ. ತಕ್ಷಣವೇ ಯಡಿಯೂರಪ್ಪ ಅವರಿಂದ ರಾಜೀನಾಮೆ ಪಡೆಯಬೇಕು. ಸಂವಿಧಾನೇತರ ಶಕ್ತಿಯ ರೂಪದಲ್ಲಿ ವಿಜಯೇಂದ್ರ ಆಡಳಿತದಲ್ಲಿ ಹಸ್ತಕ್ಷೇಪ ನಡೆಸಿರುವ ಕುರಿತು ಉನ್ನತಮಟ್ಟದ ತನಿಖೆಗೆ ಆದೇಶಿಸಬೇಕು’ ಎಂದು ಆಗ್ರಹಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರಿಗೂ ದೂರಿನ ಪ್ರತಿಗಳನ್ನು ಕಳುಹಿಸಿದ್ದಾರೆ.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಆರೋಗ್ಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಅವರಿಗೆ ನಿಲ್ಲಲು, ಮಾತನಾಡುವುದಕ್ಕೂ ಸಾಧ್ಯವಾಗದ ಸ್ಥಿತಿ ಇದೆ. ಪರಿಸ್ಥಿತಿ ದುರ್ಬಳಕೆ ಮಾಡಿಕೊಂಡು ಅವರ ಮಗ ಬಿ.ವೈ. ವಿಜಯೇಂದ್ರ ಸರ್ಕಾರದ ಮೇಲೆ ಹಿಡಿತ ಸಾಧಿಸಿದ್ದಾರೆ’ ಎಂದು ಆರೋಪಿಸಿರುವ ಸಾಮಾಜಿಕ ಹೋರಾಟಗಾರ ಕಂಚನಹಳ್ಳಿ ರವಿಕುಮಾರ್‌, ಯಡಿಯೂರಪ್ಪ ವಿರುದ್ಧ ವಿಚಾರಣೆಗೆ ಅನುಮತಿ ಕೋರಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದಾರೆ.

‘ವಿಜಯೇಂದ್ರ ಮುಖ್ಯಮಂತ್ರಿ ಕಚೇರಿಯನ್ನು ತಮ್ಮ ಅಪಾರ್ಟ್‌ಮೆಂಟ್‌ಗೆ ಸ್ಥಳಾಂತರಿಸಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಪ್ರಮುಖ ಕಡತಗಳು, ಟೆಂಡರ್‌ ದಾಖಲೆಗಳಿಗೆ ಯಡಿಯೂರಪ್ಪ ಬದಲಿಗೆ ಅವರೇ ಸಹಿ ಮಾಡುತ್ತಿದ್ದಾರೆ. ತಂದೆಯ ಅಧಿಕಾರ ದುರ್ಬಳಕೆ ಮಾಡಿಕೊಂಡು ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿದ್ದಾರೆ’ ಎಂದು ಮಂಗಳವಾರ ಸಲ್ಲಿಸಿರುವ ಅರ್ಜಿಯಲ್ಲಿ ದೂರಿದ್ದಾರೆ. 

Leave a Reply

Your email address will not be published. Required fields are marked *

error: Content is protected !!