ಉಡುಪಿ: ಆ.3: ‘ಕೃತಕ ನೆರೆ ಹಾವಳಿ-ಬೆಂಕಿ ದುರಂತ ಭೂಕುಸಿತ, ಒಂದು ಚರ್ಚೆ’ ಕಾರ್ಯಕ್ರಮ
ಉಡುಪಿ: ಪ್ರಸ್ತುತ ಎಲ್ಲಾ ಕಡೆ ಸಂಭವಿಸುತ್ತಿರುವ ಪ್ರಾಕೃತಿಕ ವಿಕೋಪ ದುರಂತಗಳಿಗೆ ಕಾರಣ ಹಾಗೂ ಎಚ್ಚರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ‘ಕೃತಕ ನೆರೆ ಹಾವಳಿ- ಬೆಂಕಿ ದುರಂತ- ಭೂಕುಸಿತ: ಒಂದು ಚರ್ಚೆ’ ಕಾರ್ಯಕ್ರಮವನ್ನು ಆ.3ರಂದು ಶನಿವಾರ ಬೆಳಗ್ಗೆ 10.30ಕ್ಕೆ ಉಡುಪಿ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದೆ.
ಉಡುಪಿ ಪತ್ರಿಕಾ ಭವನ ದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕೇವಲ ಪತ್ರಕರ್ತರಿಗೆ ಕಾರ್ಯಕ್ರಮ ನಡೆಸುವುದಕ್ಕೆ ಸೀಮಿತವಾಗಿರದೆ ಸಾಮಾಜಿಕ ಬದ್ಧತೆ ಹಾಗೂ ಕಳಕಳಿಯೊಂದಿಗೆ ಹಲವು ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರ ಭಾಗವಾಗಿ ಪ್ರಸ್ತುತ ಸಂದರ್ಭಕ್ಕೆ ಅಗತ್ಯವಾಗಿರುವ ಪ್ರಾಕೃತಿಕ ವಿಕೋಪಗಳ ಕುರಿತು ಸಾರ್ವಜನಿಕವಾಗಿ ಚರ್ಚಿಸಲು ಕಾರ್ಯಕ್ರಮವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಉಡುಪಿ ನಗರದಲ್ಲಿ ಪ್ರತಿವರ್ಷ ಬಾಧಿಸುತ್ತಿರುವ ಕೃತಕ ನೆರೆ, ಇತ್ತೀಚೆಗೆ ಹೆಚ್ಚು ಹೆಚ್ಚು ವರದಿಯಾಗುತ್ತಿರುವ ಬೆಂಕಿ ದುರಂತಗಳು ಹಾಗೂ ಜಿಲ್ಲೆ ಸೇರಿದಂತೆ ವಿವಿಧ ಕಡೆ ಸಂಭವಿಸುತ್ತಿರುವ ಭೂಕುಸಿತದ ಕುರಿತು ಚರ್ಚೆ ನಡೆಸ ಬೇಕಾಗಿರುವುದು ಇಂದಿನ ಅಗತ್ಯವಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ನಗರಸಭೆ ಪೌರಾಯುಕ್ತ ರಾಯಪ್ಪ, ಉಡುಪಿ ಜಿಲ್ಲಾ ಅಗ್ನಿ ಶಾಮಕದಳ ಅಧಿಕಾರಿ ವಿನಾಯಕ ಉ.ಕಲ್ಗುಟಕರ ಹಾಗೂ ಹಿರಿಯ ಭೂಗರ್ಭ ಶಾಸ್ತ್ರಜ್ಞ ಮಣಿಪಾಲದ ಡಾ.ಉದಯ ಶಂಕರ್ ಈ ಮೂರು ವಿಷಯಗಳ ಕುರಿತು ಚರ್ಚಿಸಲಿರುವರು. ಬಳಿಕ ಸಂವಾದ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು ವಹಿಸಲಿರುವರು.ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಮಾತ್ರವಲ್ಲದೆ ಆಸಕ್ತ ಸಾರ್ವಜನಿಕರು ಕೂಡ ಭಾಗವಹಿಸಬಹುದಾಗಿದೆ ಎಂದವರು ಮಾಹಿತಿ ನೀಡಿದರು
ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ನಜೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಕಾರ್ಯದರ್ಶಿ ರಹೀಂ ಉಜಿರೆ ಉಪಸ್ಥಿತರಿದ್ದರು.