130 ಕಿ.ಮೀ ವೇಗದಲ್ಲಿ ಗಾಡಿ ಓಡಿಸ್ತಿರಾ ಹುಷಾರ್…!
ಬೆಂಗಳೂರು: ಯಾವುದೇ ಚಾಲಕರು 130 ಕಿಮೀ ವೇಗದಲ್ಲಿ ವಾಹನ ಓಡಿಸಿ ಸಿಕ್ಕಿಬಿದ್ದರೇ ಅಂತವರ ವಿರುದ್ಧ ಆಗಸ್ಟ್ 1 ರಿಂದ ಎಫ್ ಐಆರ್ ದಾಖಲಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಸಂಚಾರ ಮತ್ತು ರಸ್ತೆ ಸುರಕ್ಷತೆ) ಅಲೋಕ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿರುವ ಅವರು, ಕರ್ನಾಟಕದಲ್ಲಿ ಎಲ್ಲಿಯಾದರೂ ಗಂಟೆಗೆ 130 ಕಿಮೀ ವೇಗದಲ್ಲಿ ಚಾಲನೆ ಮಾಡುವವರ ವಿರುದ್ಧ ಎಫ್‌ಐಆರ್‌ಗಳನ್ನು ದಾಖಲು ಮಾಡಲಾಗುವುದು, ದುಡುಕಿನ ಮತ್ತು ಅಪಾಯಕಾರಿ ಚಾಲನೆ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಶೇ. 90 ರಷ್ಟು ಮಾರಣಾಂತಿಕ ಅಪಘಾತಗಳಿಗೆ ಅತಿ ವೇಗವು ಕಾರಣವಾಗುತ್ತದೆ. ಗುರುವಾರ, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ, 155 ವಾಹನಗಳು ಗಂಟೆಗೆ 130 ಕಿಮೀ ವೇಗದಲ್ಲಿ ಚಲಿಸುತ್ತಿದ್ದವು. ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ದಾಖಲಿಸಲಾಗುತ್ತದೆ ಎಂದು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿದ್ದಾರೆ.
ಸ್ಪಾಟ್ ಮತ್ತು ಸೆಕ್ಷನಲ್ ಸ್ಪೀಡ್ ನಡುವಿನ ವ್ಯತ್ಯಾಸದ ಕುರಿತು ಮಾಹಿತಿ ನೀಡಿರುವ ಅವರು ಓವರ್ ಸ್ಪೀಡಿಂಗ್ ಅನ್ನು ಸಾಮಾನ್ಯವಾಗಿ ಕ್ಯಾಮೆರಾ ಪಾಯಿಂಟ್ ಬಳಿ ಸ್ಪಾಟ್ ಸ್ಪೀಡ್ ಎಂದು ಅಳೆಯಲಾಗುತ್ತದೆ.
ವಿಭಾಗೀಯ ವೇಗವು ಎರಡು ಕ್ಯಾಮೆರಾ ಬಿಂದುಗಳ ನಡುವಿನ ಸರಾಸರಿ ವೇಗವಾಗಿದೆ. ಬೇರೆಡೆ ವೇಗವಾಗಿ ಓಡಿಸಿ ಕ್ಯಾಮರಾಗಳ ಬಳಿ ಚಾಲಕ ವೇಗ ಕಡಿಮೆ ಮಾಡಿದರೂ ಕೇಸ್ ಬುಕ್ ಆಗುತ್ತಾರೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗಂಟೆಗೆ 105 ಕಿ.ಮೀ ವೇಗದಲ್ಲಿ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತದೆ. ಎಫ್‌ಐಆರ್‌ಗಳ ನೋಂದಣಿಗೆ 130 ಕಿಮೀ ಮಿತಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.