ವಾಲ್ಮೀಕಿ ಹಗರಣ: ಸಿಎಂ ಸಿದ್ದರಾಮಯ್ಯ ಮಾಜಿ ಸಚಿವರ ಹೆಸರು ಹೇಳುವಂತೆ ಒತ್ತಡ-ಇಡಿ ಅಧಿಕಾರಿಗಳ ವಿರುದ್ಧವೇ ಪ್ರಕರಣ ದಾಖಲು!
ಬೆಂಗಳೂರು: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ 187 ಕೋಟಿ ರೂ. ಅವ್ಯವಹಾರ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಹಣಕಾಸು ಇಲಾಖೆಯನ್ನು ಸಿಲುಕಿಸುವಂತೆ ರಾಜ್ಯ ಸರ್ಕಾರಿ ಅಧಿಕಾರಿಯೊಬ್ಬರಿಗೆ ಒತ್ತಡ ಹೇರಿದ ಆರೋಪದ ಮೇರೆಗೆ ಜಾರಿ ನಿರ್ದೇಶನಾಲಯದ ಇಬ್ಬರು ಅಧಿಕಾರಿಗಳ ವಿರುದ್ಧ ಸೋಮವಾರ ಪ್ರಕರಣ ದಾಖಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಬಿ ದೂರು ಆಧರಿಸಿ ಇಬ್ಬರು ಇಡಿ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದು ಕ್ರಿಮಿನಲ್ ಬೆದರಿಕೆ ಮತ್ತು ಶಾಂತಿಯನ್ನು ಹದಗೆಡಿಸುವ ಉದ್ದೇಶಕ್ಕೆ ಸಂಬಂಧಿಸಿದ್ದಾಗಿದೆ.
ಮುರಳಿ ಕಣ್ಣನ್ ಎಂಬ ಇಡಿ ಅಧಿಕಾರಿ ಮತ್ತು ಮಿತ್ತಲ್ ಎಂಬ ಅಧಿಕಾರಿ ವಿರುದ್ಧ ಕಲ್ಲೇಶ್ ಆರೋಪ ಮಾಡಿದ್ದಾರೆ. ಹೈದರಾಬಾದ್ ಮೂಲದ ಕಂಪನಿಗಳಿಗೆ 88 ರೂಪಾಯಿ ಅಕ್ರಮ ವರ್ಗಾವಣೆ ಸೇರಿದಂತೆ 187 ಕೋಟಿ ರೂಪಾಯಿ ಅವ್ಯವಹಾರದ ಬಗ್ಗೆ ಕರ್ನಾಟಕ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡವಲ್ಲದೆ, ಸಿಬಿಐ ತನಿಖೆ ನಡೆಸುತ್ತಿದೆ.
ಸಿಬಿಐ ಈ ಪ್ರಕರಣದ ತನಿಖೆಗೆ ಜಾರಿ ನಿರ್ದೇಶನಾಲಯವನ್ನು ನಿಯೋಜಿಸಿದ್ದು, ಮಾಜಿ ಸಚಿವ ಬಿ.ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷ ಮತ್ತು ಶಾಸಕ ಬಸನಗೌಡ ದದ್ದಲ್‌ಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದ ಇಡಿ ಅಧಿಕಾರಿಗಳು ನಾಗೇಂದ್ರ ಅವರನ್ನೂ ಬಂಧಿಸಿದೆ. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಜುಲೈ 16 ರಂದು ನಡೆದ ವಿಚಾರಣೆ ವೇಳೆ ಕಣ್ಣನ್ 17 ಪ್ರಶ್ನೆಗಳನ್ನು ಕೇಳಿದ್ದು, ಅದಕ್ಕೆ ಅವರು ತಕ್ಷಣವೇ ಉತ್ತರ ನೀಡಿರುವುದಾಗಿ ಕಲ್ಲೇಶ್ ಹೇಳಿದ್ದಾರೆ. ಮಾಜಿ ಸಚಿವ ಬಿ ನಾಗೇಂದ್ರ, ಸಿಎಂ ಸಿದ್ದರಾಮಯ್ಯ ಹಣಕಾಸು ಇಲಾಖೆಯನ್ನು ಹೆಸರು ಹೇಳುವಂತೆ ಕಣ್ಣನ್ ಕೇಳಿಕೊಂಡರು ಎಂದು ಅವರು ಆರೋಪಿಸಿದ್ದಾರೆ.
ಇದಲ್ಲದೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಮಿತ್ತಲ್ ಬೆದರಿಕೆ ಹಾಕಿದ್ದಾರೆ ಎಂದು ಕಲ್ಲೇಶ್ ಹೇಳಿದ್ದಾರೆ ಮತ್ತು ಇಡಿ ಸಹಾಯ ಬೇಕಾದರೆ ಮುಖ್ಯಮಂತ್ರಿ, ನಾಗೇಂದ್ರ ಮತ್ತು ಹಣಕಾಸು ಇಲಾಖೆ ಹೆಸರು ಹೇಳುವಂತೆ ಹೇಳಿದರು. ತಾನು ಅಪರಾಧದಲ್ಲಿ ಭಾಗಿಯಾಗಿಲ್ಲವಾದರೂ ತನಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ಇದರಲ್ಲಿ ಮುಖ್ಯಮಂತ್ರಿ, ಮಾಜಿ ಸಚಿವರು ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಲಿಖಿತವಾಗಿ ನೀಡುವಂತೆ ಒತ್ತಾಯಿಸಿರುವುದಾಗಿ ದೂರುದಾರರು ದೂರಿದ್ದಾರೆ.