ಬಲಪಂಥೀಯ ಗುಂಪುಗಳಿಂದ ಸಂಭಾವ್ಯ ಬೆದರಿಕೆ ಕುರಿತು ಗುಪ್ತಚರ ಮಾಹಿತಿ: ರಾಹುಲ್‌ ಗಾಂಧಿ ನಿವಾಸದ ಹೊರಗೆ ಬಿಗಿ ಭದ್ರತೆ

ಹೊಸದಿಲ್ಲಿ: ಬಲಪಂಥೀಯ ಗುಂಪುಗಳಿಂದ ಸಂಭಾವ್ಯ ಬೆದರಿಕೆಗಳ ಕುರಿತು ಗುಪ್ತಚರ ಮಾಹಿತಿಯ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀಸರು ಕಾಂಗ್ರೆಸ್‌ ಸಂಸದ ಹಾಗೂ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಅವರ ನಿವಾಸದ ಹೊರಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಅರೆಸೇನಾ ಪಡೆಯ ಒಂದು ಪ್ಲೆಟೂನ್‌ ಹಾಗೂ ದಿಲ್ಲಿ ಪೊಲೀಸರ ಹಲವು ತಂಡಗಳನ್ನು ರಾಹುಲ್‌ ಗಾಂಧಿ ಅವರ ನಿವಾಸದ ಹೊರಗೆ ನಿಯೋಜಿಸಲಾಗಿದೆ.

ಈ ಪ್ರದೇಶದಲ್ಲಿ ಸಂಭಾವ್ಯ ಸಮಸ್ಯೆಯ ಕುರಿತಂತೆ ಮಾಹಿತಿಯ ಬೆನ್ನಲ್ಲೇ ಈ ಕ್ರಮಕೈಗೊಳ್ಳಲಾಗಿದೆ. ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರ ಚೊಚ್ಚಲ ಭಾಷಣದ ನಂತರ ಈ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ.

ವಿಪಕ್ಷ ನಾಯಕನಾಗಿ ತನ್ನ ಮೊದಲ ಭಾಷಣದಲ್ಲಿ ರಾಹುಲ್ ಗಾಂಧಿಯವರು ಶಿವನ ಚಿತ್ರ ಹಿಡಿದುಕೊಂಡು ಅಹಿಂಸೆಯ ಬಗ್ಗೆ ಮಾತಾಡುತ್ತಾ ಮೋದಿ, ಬಿಜೆಪಿ ಹಾಗು ಸಂಘ ಪರಿವಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಅವರು ನಿಜವಾದ ಹಿಂದೂಗಳೇ ಅಲ್ಲ. ಅವರು ಹಿಂದೂಗಳನ್ನು ಪ್ರತಿನಿಧಿಸುವುದಿಲ್ಲ. ಅವರು ಹಿಂದೂಗಳ ಹೆಸರಲ್ಲಿ ಬರೀ ಸುಳ್ಳು, ದ್ವೇಷ ಹಾಗು ಹಿಂಸೆಯ ಮಾತಾಡ್ತಾರೆ ಎಂದು ಹೇಳಿದ್ದರು.

ರಾಹುಲ್ ಅವರ ಹೇಳಿಕೆ ವಿರುದ್ಧ ಆಕ್ಷೇಪ, ಆಕ್ರೋಶ, ಪ್ರತಿಭಟನೆಗಳು ನಡೆದಿದ್ದವು. ಅಹ್ಮದಾಬಾದ್ ನಲ್ಲಿ ಬಜರಂಗದಳ ಕಾರ್ಯಕರ್ತರು ಕಾಂಗ್ರೆಸ್ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಆದರೆ ರಾಹುಲ್ ಗಾಂಧಿ ತಾನು ಬಿಜೆಪಿ ಆರೆಸ್ಸೆಸ್ ವಿರುದ್ಧ ಹೇಳಿದ್ದನ್ನು ಸಮರ್ಥಿಸಿಕೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!