ನಿಸರ್ಗಾ ಚಂಡಮಾರುತ: 100 ಕಿಮೀ ವೇಗದಲ್ಲಿ ಗಾಳಿ, ಮುಂಬೈಗೆ ರೆಡ್‌ ಅಲರ್ಟ್‌ ಘೋಷಣೆ

ನವದೆಹಲಿ: ಮಂಗಳವಾರ ಬೆಳಿಗ್ಗೆ ಹವಾಮಾನ ಇಲಾಖೆಯಿಂದ ಮುಂಬೈನಲ್ಲಿ ‘ರೆಡ್ ಅಲರ್ಟ್’ ಹೊರಡಿಸಲಾಗಿದ್ದು, ನಿಸರ್ಗಾ ಚಂಡಮಾರುತವು ಬುಧವಾರ ಕರಾವಳಿಗೆ ಅಪ್ಪಳಿಸಲಿದ್ದು, 100 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ.

ಲಕ್ಷದ್ವೀಪ ಪ್ರದೇಶದ ಸಮೀಪ ಆಗ್ನೇಯ ಮತ್ತು ಪೂರ್ವ-ಮಧ್ಯ ಅರೇಬಿಯನ್ ಸಮುದ್ರದ ಮೇಲಿನ ಕುಸಿತವು ತೀವ್ರ ಚಂಡಮಾರುತಕ್ಕೆ ಬದಲಾಗುವ ನಿರೀಕ್ಷೆಯಿದ್ದು, ಮುಂಬೈ ಮತ್ತು ಪಕ್ಕದ ಪ್ರದೇಶಗಳಲ್ಲಿ ಇಂದು ಮತ್ತು ನಾಳೆ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ  ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರೊಂದಿಗೆ ವಿಡಿಯೊ ಕಾನ್ಫರೆನ್ಸ್ ನಡೆಸಿ ಚಂಡಮಾರುತವನ್ನು ಎದುರಿಸುವಲ್ಲಿ ರಾಜ್ಯದ ಸಿದ್ಧತೆ ಕುರಿತು ಚರ್ಚಿಸಿದ್ದರು.

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯು (ಎನ್‌ಡಿಆರ್‌ಎಫ್) ಈಗಾಗಲೇ ರಾಜ್ಯಾಂದ್ಯಂತ ಚಂಡಮಾರುತದ ಹೊಡೆತಕ್ಕೆ ಸಿಲುಕುವ ಪ್ರದೇಶಗಳಲ್ಲಿ ಹಲವಾರು ರಕ್ಷಣಾ ತಂಡಗಳನ್ನು ನಿಯೋಜಿಸಿದೆ. ಮುಂಬೈನಲ್ಲಿ ಮೂರು ತಂಡಗಳು, ಪಾಲ್ಘರ್‌ನಲ್ಲಿ ಎರಡು ಮತ್ತು ಥಾಣೆ, ರಾಯ್‌ಗಡ್, ರತ್ನಾಗಿರಿ ಮತ್ತು ಸಿಂಧುದರ್ಗ್‌ನಲ್ಲಿ ತಲಾ ಒಂದು ತಂಡಗಳು ಕಾರ್ಯನಿರ್ವಹಿಸಲಿವೆ.

ನಿಸರ್ಗಾ ತೀವ್ರ ಚಂಡಮಾರುತವಾಗಿದ್ದು, ಇದರಿಂದ 90-100 ಕಿ.ಮೀ ವೇಗದಲ್ಲಿ ಗಾಳಿ ಬೀಸಬಹುದೆಂದು ನಾವು ನಿರೀಕ್ಷಿಸುತ್ತಿದ್ದೇವೆ. ಇದು ಕೇವಲ ಅಂದಾಜು. ಹಾಗಾಗಿ, ಮುನ್ನೆಚ್ಚರಿಕೆ ಕ್ರಮವಾಗಿ ನಾವು ಎರಡು ರಾಜ್ಯಗಳ (ಮಹಾರಾಷ್ಟ್ರ ಮತ್ತು ಗುಜರಾತ್) ಕರಾವಳಿ ಪ್ರದೇಶಗಳಿಂದ ಜನರನ್ನು ಸ್ಥಳಾಂತರಿಸಲು ಶೀಘ್ರದಲ್ಲೇ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಎಸ್.ಎನ್. ಪ್ರಧಾನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ರಾಷ್ಟ್ರೀಯ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡಗಳ ಆದೇಶದ ಮೇಲೆರೆ ಆಯಾ ಜಿಲ್ಲಾಧಿಕಾರಿಗಳು ಎಲ್ಲ ಮೀನುಗಾರರು ಸಮುದ್ರ ತೀರದಿಂದ ಮರಳುವಂತೆ ತಿಳಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!