ಲೋಕಸಭೆ ವಿಪಕ್ಷ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ

ನವದೆಹಲಿ: ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ಕಾಂಗ್ರೆಸ್ ನಾಯಕ ಹಾಗೂ ರಾಯ್​ಬರೇಲಿ ಸಂಸದ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

ಲೋಕಸಭೆಯ ವಿರೋಧ ಪಕ್ಷದ ನಾಯಕರಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ. ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಇಂಡಿಯಾ ಮೈತ್ರಿಕೂಟ ಸಭೆ ನಡೆಯಿತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು.

ಇಂಡಿಯಾ ಬ್ಲಾಕ್ ಸಭೆಯ ನಂತರ ಮಾಹಿತಿ ನೀಡಿದ ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಸಂಸದ ಕೆ.ಸಿ. ವೇಣುಗೋಪಾಲ್, ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಸದನದ ವಿರೋಧ ಪಕ್ಷದ ನಾಯಕರನ್ನಾಗಿ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ದೆಹಲಿಯ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಿಂದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಪಾಲ್ಗೊಂಡ ಬಳಿಕ ಈ ನಿರ್ಣಯ ಹೊರಬಿದ್ದಿದೆ. ಬುಧವಾರ ಲೋಕಸಭೆ ಸ್ಪೀಕರ್ ಚುನಾವಣೆ ನಡೆಯಲಿದ್ದು, ಇದರ ಬೆನ್ನಲ್ಲೇ ವಿರೋಧ ಪಕ್ಷದ ನಾಯಕನ್ನಾಗಿ ರಾಹುಲ್ ಗಾಂಧಿ ಅವರನ್ನು ಆಯ್ಕೆ ಮಾಡಲಾಗಿದೆ.

ಪತ್ರ ಬರೆದ ಸೋನಿಯಾ ಗಾಂಧಿ

ಕಾಂಗ್ರೆಸ್‌ನ ಸಂಸದೀಯ ಪಕ್ಷದ ನಾಯಕಿ ಸೋನಿಯಾ ಗಾಂಧಿಯವರು ಈ ಸಂಬಂಧ ಲೋಕಸಭಾ ಹಂಗಾಮಿ ಸ್ಪೀಕರ್‌ಗೆ ಪತ್ರ ಬರೆದಿದ್ದಾರೆ. ವಿರೋಧ ಪಕ್ಷಗಳ ‘ಇಂಡಿಯಾ’ ಬಣದ ಪಕ್ಷಗಳ ಸದನದ ನಾಯಕರ ಸಭೆಯಲ್ಲಿಯೂ ಈ ವಿಚಾರ ಚರ್ಚಿಸಲಾಗಿದ್ದು, ಬಣದ ಎಲ್ಲ ನಾಯಕರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇತ್ತೀಚೆಗಷ್ಟೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕ ಸಭೆಯಲ್ಲಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬೇಕೆಂದು ಒಮ್ಮತದ ಆಗ್ರಹ ಕೇಳಿಬಂದಿತ್ತು. ಈ ಸಭೆಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕ ಸಭೆಯಲ್ಲಿ ಪಕ್ಷದ ನಾಯಕರನ್ನಾಗಿ ನೇಮಿಸಬೇಕು ಎಂದು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರು ನಿರ್ಣಯ ಅಂಗೀಕರಿಸಿದ್ದರು.

ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ ಅವರ ಹೆಸರಿನ ಪ್ರಸ್ತಾವನೆ ಅಂಗೀಕಾರವಾದಾಗ, ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಈ ಬಗ್ಗೆ ಯೋಚಿಸಲು ಸ್ವಲ್ಪ ಸಮಯ ಕೇಳಿದ್ದರು.

ಅಂದಹಾಗೆ 2014 ಮತ್ತು 2019ರ ಲೋಕಸಭೆಯಲ್ಲಿ ಕ್ರಮವಾಗಿ ಕಾಂಗ್ರೆಸ್ 44 ಮತ್ತು 52 ಸ್ಥಾನಗಳನ್ನು ಕಾಂಗ್ರೆಸ್ ಗೆದ್ದಿತ್ತು. ವಿರೋಧ ಪಕ್ಷಗಳ ಸ್ಥಾನಮಾನಕ್ಕೆ ಕನಿಷ್ಠ 54 ಸ್ಥಾನಗಳ ಅಗತ್ಯವಿದೆ.

Leave a Reply

Your email address will not be published. Required fields are marked *

error: Content is protected !!