ತುರ್ತು ಪರಿಸ್ಥಿತಿ ಬಗ್ಗೆ ಇನ್ನು ಎಷ್ಟು ದಿನ ಮಾತನಾಡುತ್ತೀರಿ, 10 ವರ್ಷದ ಅಘೋಷಿತ ಪರಿಸ್ಥಿತಿ ಬಗ್ಗೆಯೂ ಮಾತನಾಡಿ: ಮೋದಿಗೆ ಖರ್ಗೆ ತಿರುಗೇಟು

ನವದೆಹಲಿ: ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಎಷ್ಟು ದಿನ ಆಡಳಿತ ನಡೆಸಲು ಬಯಸುತ್ತೀರಿ? ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, 10 ವರ್ಷ ಅಘೋಷಿತ ತುರ್ತು ಪರಿಸ್ಥಿತಿ ಬಗ್ಗೆಯೂ ಮಾತಾಡಿ ಎಂದು ಸೋಮವಾರ ತಿರುಗೇಟು ನೀಡಿದ್ದಾರೆ.

ಇಂದಿನಿಂದ 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದ್ದು, ಈ ಮಧ್ಯೆ, ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಟಿಎಂಸಿ ಸಂಸದ ಸೌಗತ ರಾಯ್ ಸೇರಿದಂತೆ ವಿರೋಧ ಪಕ್ಷಗಳ ಮೈತ್ರಿಕೂಟ ಇಂಡಿಯಾ ಬಣದ ನಾಯಕರು ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

ಕೈಯಲ್ಲಿ ಸಂವಿಧಾನದ ಪ್ರತಿಗಳನ್ನು ಹಿಡಿದುಕೊಂಡು, ಬಿಜೆಪಿಯವರು ಸಂವಿಧಾನಕ್ಕೆ ಅಗೌರವ ತೋರುತ್ತಿದ್ದಾರೆ ಎಂದು ಆರೋಪಿಸಿದ ಇಂಡಿಯಾ ಬಣದ ನಾಯಕರು, ಸಂವಿಧಾನ ರಕ್ಷಿಸುವಂತೆ ಘೋಷಣೆಗಳನ್ನು ಕೂಗಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಮೋದಿಯವರು ಸಂವಿಧಾನವನ್ನು ಹಾಳು ಮಾಡಲು ಯತ್ನಿಸಿದ್ದಾರೆ, ಅದಕ್ಕಾಗಿಯೇ ಇಂದು ಎಲ್ಲ ಪಕ್ಷಗಳ ನಾಯಕರು ಒಗ್ಗೂಡಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇಲ್ಲಿ ಗಾಂಧಿ ಪ್ರತಿಮೆ ಇತ್ತು, ಎಲ್ಲ ಪ್ರಜಾಪ್ರಭುತ್ವವನ್ನು ನಾಶ ಮಾಡುತ್ತಿದ್ದಾರೆ. ಅದಕ್ಕಾಗಿಯೇ ಇಂದು ನಾವು ಮೋದಿ ಜೀ, ನೀವು ಸಂವಿಧಾನದ ಪ್ರಕಾರ ಮುಂದುವರಿಯಬೇಕು ಎಂದು ತೋರಿಸಲು ಬಯಸುತ್ತೇವೆ” ಎಂದರು.

“ಅವರು ತುರ್ತು ಪರಿಸ್ಥಿತಿಯ ಬಗ್ಗೆ 100 ಬಾರಿ ಹೇಳುತ್ತಾರೆ. ಆದರೆ ತುರ್ತು ಪರಿಸ್ಥಿತಿ ಘೋಷಿಸದೆ ನೀವು 10 ವರ್ಷಗಳಿಂದ ತುರ್ತು ಪರಿಸ್ಥಿತಿಯನ್ನು ನಿರ್ಮಿಸಿದ್ದೀರಿ. ತರ್ತು ಪರಿಸ್ಥಿತಿ ಬಗ್ಗೆ ಮಾತನಾಡುತ್ತಾ ಎಷ್ಟು ದಿನ ಆಡಳಿತ ನಡೆಸುತ್ತೀರಿ?” ಎಂದು ಖರ್ಗೆ ಪ್ರಶ್ನಿಸಿದರು.

“ಸಂಸತ್ ಸದಸ್ಯರಾಗಿ ಇಂದು ಪ್ರಮಾಣ ವಚನ ಸ್ವೀಕರಿಸುವ ಮುನ್ನ ಹೊಸ ಸಂಸತ್ ಭವನದ ಹೊರಗೆ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯ ಬಗ್ಗೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಜೂನ್ 25, 1975 ರಂದು ದೇಶದಲ್ಲಿ ಜಾರಿಗೆ ಬಂದ 21 ತಿಂಗಳ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಂಡ ಪ್ರಧಾನಿ ಮೋದಿ, ದೇಶವನ್ನು ಜೈಲಿನಂತೆ ಪರಿವರ್ತಿಸಿದ ಸಮಯವನ್ನು ಭಾರತದ ಹೊಸ ಪೀಳಿಗೆ ಎಂದಿಗೂ ಮರೆಯುವುದಿಲ್ಲ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!