ಮೆಕ್ಕಾ ಯಾತ್ರೆ ವೇಳೆ ದುರಂತ: ತೀವ್ರ ಶಾಖಕ್ಕೆ 80 ಭಾರತೀಯ ಹಜ್ ಯಾತ್ರಿಕರು ಸಾವು?
ನವದೆಹಲಿ: ಹಜ್ ಯಾತ್ರೆ ವೇಳೆ ತಾಪಮಾನ ಹೆಚ್ಚಾಗಿ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿವೆ. ಮೆಕ್ಕಾದಲ್ಲಿ ಈ ವರ್ಷದ ಹಜ್ ಯಾತ್ರೆಯ ಸಂದರ್ಭದಲ್ಲಿ ಸಾವನ್ನಪ್ಪಿದ ನೂರಾರು ಜನರಲ್ಲಿ 80 ಭಾರತೀಯರು ಸೇರಿದ್ದಾರೆ. ಹಲವಾರು ಭಾರತೀಯ ಯಾತ್ರಾರ್ಥಿಗಳು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ, ಸಾವಿನ ನಿಜವಾದ ಸಂಖ್ಯೆ ಎಷ್ಟು ಎಂಬುದು ಇನ್ನೂ ಸ್ಪಷ್ವವಾಗಿ ತಿಳಿದು ಬಂದಿಲ್ಲ.
ಇಲ್ಲಿಯವರೆಗೆ 550 ಕ್ಕಿಂತ ಹೆಚ್ಚು ಸಾವುನೋವುಗಳು ಸಂಭವಿಸಿದೆ ಎಂದು ಪ್ರಾಥಮಿಕವಾಗಿ ತಿಳಿಸಲಾಗಿದೆ. ತೀವ್ರವಾದ ಶಾಖ ಮತ್ತು ವಯಸ್ಸಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಇದಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಮೃತ ಭಾರತೀಯರಲ್ಲಿ ಒಂಬತ್ತು ಮಂದಿ ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ, ಹೆಚ್ಚಿನವರು ವೃದ್ಧಾಪ್ಯ ಮತ್ತು ಶಾಖ-ಸಂಬಂಧಿತ ಕಾರಣಗಳಿಗೆ ಬಲಿಯಾಗಿದ್ದಾರೆ, ಆದರೆ ಎರಡು ಸಾವುಗಳು ರಸ್ತೆ ಅಪಘಾತಗಳಿಂದ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.
ಸೌದಿ ರಾಷ್ಟ್ರೀಯ ಹವಾಮಾನ ಕೇಂದ್ರದ ಪ್ರಕಾರ, ಮಂಗಳವಾರದಂದು ತಾಪಮಾನವು ಮೆಕ್ಕಾದಲ್ಲಿ 47 ಡಿಗ್ರಿ ಸೆಲ್ಸಿಯಸ್ (117 ಡಿಗ್ರಿ ಫ್ಯಾರನ್‌ಹೀಟ್) ತಲುಪಿದೆ. ಸಾಂಪ್ರಾದಾಯಿಕ ಆಚರಣೆಯಾದ ಕಲ್ಲಎಸೆಯುವಾಗ ಕೆಲವರು ಮೂರ್ಚೆ ಹೋಗಿದ್ದಾರೆ ಎಂದು ತಿಳಿದುಬಂದಿದೆ.
ಮೆಕ್ಕಾದ ಹಳೇಯ ಮಸೀದಿಯಲ್ಲಿ, ಸೋಮವಾರ ತಾಪಮಾನವು 51.8 °C (125 °F) ತಲುಪಿದೆ, ಆದರೂ ಯಾತ್ರಿಕರು ಈಗಾಗಲೇ ಮಿನಾಗೆ ತೆರಳಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಪಂಚದಾದ್ಯಂತದ ಮುಸ್ಲಿಮರು ಪ್ರತಿ ವರ್ಷ ಈ ಐದು ದಿನಗಳ ತೀರ್ಥಯಾತ್ರೆಗೆ ಹೋಗುತ್ತಾರೆ. ಈ ವರ್ಷ, ಸುಮಾರು 1.8 ಮಿಲಿಯನ್ ಜನರು ಹಜ್‌ಗೆ ತೆರಳಿದ್ದಾರೆ. ಈ ವರ್ಷ ಸುಮಾರು 1.75 ಲಕ್ಷ ಭಾರತೀಯರು ಹಜ್‌ಗೆ ತೆರಳಿದ್ದರು, ಇದು ಜೂನ್ 13 ರಂದು ಪ್ರಾರಂಭವಾಯಿತು.
ಭಾರತವು ಹಾಜಿಗಳ ವಾಸ್ತವ್ಯವನ್ನು ಆರಾಮದಾಯಕವಾಗಿಸಲು ಸಾಧ್ಯವಿರುವ ಎಲ್ಲ ಬೆಂಬಲವನ್ನು ವಿಸ್ತರಿಸಿದೆ ಮತ್ತು ರಿಯಾದ್‌ನಿಂದ ಮಕ್ಕಾಕ್ಕೆ ಹೈಸ್ಪೀಡ್ ರೈಲಿನಲ್ಲಿ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದೆ. ಪ್ರತಿ ವರ್ಷ, ಹಜ್ ಯಾತ್ರೆಯ ಸಮಯದಲ್ಲಿ ಗಮನಾರ್ಹ ಸಂಖ್ಯೆಯ ಹಿರಿಯ ಯಾತ್ರಾರ್ಥಿಗಳು ಸಾವನ್ನಪ್ಪುತ್ತಾರೆ, ಕೆಲವರು ಅದನ್ನು ಅಂತಿಮ ಆಸೆ ಎಂದು ಹೇಳುತ್ತಾರೆ. ಇದಲ್ಲದೆ, ಈ ಯಾತ್ರಿಕರು ನಡೆಯುವಾಗ 50 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚು ಸುಡುವ ತಾಪಮಾವಿರುತ್ತದೆ. ಇದರಿಂದ ನಿರ್ಜಲೀಕರಣಕ್ಕೆ ಕಾರಣವಾಗಿ ಅನಾಹುತ ಸಂಭವಿಸುತ್ತದೆ.
ಏತನ್ಮಧ್ಯೆ, ಈಜಿಪ್ಟ್ ಈ ಸಾವುನೋವುಗಳಲ್ಲಿ ಅತ್ಯಧಿಕ ಸಂಖ್ಯೆಯನ್ನು ಹೊಂದಿದೆ, 300 ಕ್ಕೂ ಹೆಚ್ಚು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಅಂತೆಯೇ, ಜೋರ್ಡಾನ್, ಇಂಡೋನೇಷ್ಯಾ, ಇರಾನ್, ಸೆನೆಗಲ್, ಟುನೀಶಿಯಾ ಮತ್ತು ಕುರ್ದಿಸ್ತಾನ್‌ನ ಹೆಚ್ಚು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಜೂನ್ 16 ರಂದು 2,700 ಕ್ಕೂ ಹೆಚ್ಚು ನಿಶ್ಯಕ್ತಿ ಪ್ರಕರಣಗಳನ್ನು ವರದಿ ಮಾಡಿದ ಹೊರತಾಗಿಯೂ ಸೌದಿ ಅರೇಬಿಯಾ ಸಾವಿನ ಸಂಖ್ಯೆಯ ಯಾವುದೇ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ.