ಉಡುಪಿ: ಚಂದ್ರನ ಮೇಲೆ ವಿಮಾನ!
ಉಡುಪಿ: ಚಂದ್ರನು ಕುಂಭರಾಶಿಯ ಟಿಎಕ್ಯುಆರ್ ನಕ್ಷತ್ರವನ್ನು ಮುಚ್ಚವ ಅಚ್ಛಾದನೆ ಪ್ರಕ್ರಿಯೆ ಸಂದರ್ಭ ವಿಮಾನವೊಂದು ಚಂದ್ರನ ಮುಂದಿನಿಂದ ಹಾದು ಹೋದ ಕ್ಷಣಗಳು ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ಅತುಲ್ ಭಟ್ ಅವರ ಕ್ಯಾಮೆರಾದಲ್ಲಿ ಸೆರೆಯಾದವು. ಅ.26, ಸಂಜೆ 7.29ಕ್ಕೆ ಚಂದ್ರನು ಕುಂಭರಾಶಿಯ ಟಿ–ಎಕ್ಯುಆರ್ ನಕ್ಷತ್ರವನ್ನು ಮುಚ್ಚುವ ಆಚ್ಛಾದನೆ ಪ್ರಕ್ರಿಯೆ ನಡೆಯಿತು. 317 ಜ್ಯೋತಿರ್ವರ್ಷ ದೂರದಲ್ಲಿರುವ ಸೂರ್ಯನ ವ್ಯಾಸಕ್ಕಿಂತ 4 ಪಟ್ಟು ದೊಡ್ಡದಾದ ಈ ನಕ್ಷತ್ರವು ಮಸುಕಾಗಿ ಕಾಣಿಸುತ್ತಿದ್ದಂತೆ ಚಂದ್ರನು ಅದರ ಮುಂದೆ ಹಾದು ಹೋಯಿತು. ಪುನಃ ಈ ನಕ್ಷತ್ರವು 8.27ಕ್ಕೆ ಗೋಚರಿಸಿತು. ಆಕಾಶದಲ್ಲಿ ಒಂದು ಗ್ರಹ ಅಥವಾ ನಕ್ಷತ್ರದ ಮುಂದಿನಿಂದ ಇನ್ನೊಂದು ಸಣ್ಣ ಗ್ರಹ ಅಥವಾ ಉಪಗ್ರಹವು ಹಾದು ಹೋಗುವ ಪ್ರಕ್ರಿಯೆಯನ್ನು ಸಂಕ್ರಮಣ ಎನ್ನಲಾಗುತ್ತದೆ. ಅಂತೆಯೇ ಸೂರ್ಯ ಹಾಗೂ ಗ್ರಹಗಳು ಒಂದು ರಾಶಿಯ ಮುಂದೆ ಹಾದು ಹೋಗುವುದನ್ನು ಕೂಡ ಸಂಕ್ರಮಣ ಎನ್ನುತ್ತಾರೆ ಎಂದು ಅತುಲ್ ಭಟ್ ಅವರು ತಿಳಿಸಿದ್ದಾರೆ. |