ಶಿರಾ ಮತದಾರರಿಗೆ ಹಣ ಹಂಚಿಕೆ ವಿಡಿಯೊ ವೈರಲ್: ಬಿಜೆಪಿ ಮುಖಂಡರಿಗೆ ಸ್ಥಳೀಯರ ತರಾಟೆ

ತುಮಕೂರು: ಶಿರಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಳ್ಳಿಗಳಲ್ಲಿ ಮಹಿಳಾ ಮತದಾರರಿಗೆ ಬಿಜೆಪಿ ಬೆಂಬಲಿಗರು ಎನ್ನಲಾದವರು ಸೋಮವಾರ ರಾತ್ರಿ ಹಣ ಹಂಚುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. 

ಹಣ ಹಂಚಲು ಹಾಸನದಿಂದ ಬಂದಿದ್ದ ಬಿಜೆಪಿ ಮುಖಂಡರನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ದೃಶ್ಯಗಳು ವಿಡಿಯೊದಲ್ಲಿವೆ. ಹಾಸನ ಬಿಜೆಪಿ ಶಾಸಕ ಪ್ರೀತಂಗೌಡ ಬೆಂಬಲಿಗರು ಎಂದು ಅವರು ಹೇಳಿಕೊಂಡಿದ್ದಾರೆ.

ಹಾಸನ, ಮಂಡ್ಯ ಸೇರಿದಂತೆ ಕ್ಷೇತ್ರದ ಹೊರಗಿನಿಂದ ಬಂದಿರುವ ಬಿಜೆಪಿ ಮುಖಂಡರು ಹಣ ಹಂಚುತ್ತಿದ್ದಾರೆ ಎನ್ನುವ ಸುದ್ದಿ ಎರಡು ದಿನಗಳಿಂದ ಶಿರಾ ಕ್ಷೇತ್ರದಲ್ಲಿ ಹರಿದಾಡುತ್ತಿದೆ. 

ಶಿರಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಮಹಿಳೆಯರನ್ನು ಸೇರಿಸಿರುವ ಮುಖಂಡರು, ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ.‌ ಅಭಿವೃದ್ಧಿಗಾಗಿ ಇಲ್ಲೂ ಬಿಜೆಪಿ ಬೆಂಬಲಿಸಿ. ಒಂದು ವೇಳೆ ಕಾಂಗ್ರೆಸ್ ಅಥವಾ ಜೆಡಿಎಸ್ ಶಾಸಕರು ಗೆದ್ದರೆ ನಿಮ್ಮ ಹಳ್ಳಿಗೆ ಏನೂ ಅನುದಾನ ಬರುವುದಿಲ್ಲ’ ಎಂದು ಭಾಷಣ ಮಾಡಿರುವ ದೃಶ್ಯಗಳು ವಿಡಿಯೊದಲ್ಲಿವೆ.

‘ಶಾಸಕ ಪ್ರೀತಂಗೌಡ ಅವರು ಅರಿಸಿನ, ಕುಂಕುಮಕ್ಕೆ ಎಂದು ಈಗ ಮಹಿಳೆಯರಿಗೆ ತಲಾ ₹200 ನೀಡಲು ಹೇಳಿದ್ದಾರೆ. ಮತ್ತೆ ಮುಂದಿನ ವಾರ ₹ 200 ನೀಡುತ್ತೇವೆ. ಮಹಿಳೆಯರನ್ನು ಯಾರೂ ಗಮನಿಸಿಕೊಳ್ಳುವುದಿಲ್ಲ. ಕೊನೆಯಲ್ಲಿ ನಿಮಗೆ ಏನೊ ಕೊಡಬೇಕೊ ಅದನ್ನು ತಲುಪಿಸುತ್ತೇವೆ. ನೀವು ಕಮಲದ ಗುರುತಿಗೆ ಮತ ಹಾಕಿ’ ಎಂದು ಮನವಿ ಮಾಡಿಕೊಳ್ಳಲಾಗಿದೆ.

ಹಾಸನದ ಬಿಜೆಪಿ ಮುಖಂಡ ಎಂದು ಹೇಳಿಕೊಂಡ ವ್ಯಕ್ತಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ದೃಶ್ಯ ಮತ್ತೊಂದು ವಿಡಿಯೊದಲ್ಲಿದೆ. 

‘ಏಕೆ ಬಂದಿದ್ದೀರಿ. ಹಣ ಹಂಚಲು ಬಂದಿದ್ದೀರಾ’ ಎಂದು ಗ್ರಾಮಸ್ಥರೊಬ್ಬರು ಪ್ರಶ್ನಿಸಿದ್ದಾರೆ. ಆಗ ಆ ವ್ಯಕ್ತಿ ‘ಮತ ಕೇಳಲು ನಾವು ಹಾಸನದಿಂದ ಬಂದಿದ್ದೇವೆ, ಪ್ರೀತಂಗೌಡ ಬೆಂಬಲಿಗರು’ ಎಂದು ತಿಳಿಸಿದ್ದಾರೆ. ‘ಹಗಲು ಹೊತ್ತಿನಲ್ಲಿ ಪ್ರಚಾರ ಮಾಡಿ. ರಾತ್ರಿ ಏಕೆ ಬಂದಿದ್ದೀರಿ’ ಎಂದು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವುದನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗಿದೆ. 

ಚುನಾವಣಾಧಿಕಾರಿಗೆ ಕಾಂಗ್ರೆಸ್‌ ದೂರು

ಶಿರಾ: ಚುನಾವಣಾ ಅಕ್ರಮದಲ್ಲಿ ತೊಡಗಿರುವ ಬಿಜೆಪಿ ಅಭ್ಯರ್ಥಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಶಿರಾ ತಾಲ್ಲೂಕು ಕಾಂಗ್ರೆಸ್‌ ಸಮಿತಿ ಮಂಗಳವಾರ ಚುನಾವಣಾ ಅಧಿಕಾರಿಗೆ ದೂರು ನೀಡಿದೆ. 

ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಬಿಜೆಪಿ ಶಾಸಕರು, ಮುಖಂಡರು ಮತ್ತು ಕಾರ್ಯಕರ್ತರು ಡಾ.ಸಿ.ಎಂ.ರಾಜೇಶ್ ಗೌಡ ಪರವಾಗಿ ಕ್ಷೇತ್ರದಲ್ಲಿ ಹಣ, ಹೆಂಡ, ಸೀರೆ, ಹಂಚುತ್ತಿದ್ದಾರೆ. ಚುನಾವಣೆ ಅಕ್ರಮಗಳಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್‌ ಮುಖಂಡರು ದೂರಿದ್ದಾರೆ.

ಶಾಸಕ ಪ್ರೀತಂ ಗೌಡ ಅವರು ಹಾಸನ, ಬೆಂಗಳೂರು, ಮಂಗಳೂರಿನಿಂದ ಜನರನ್ನು ಕರೆತಂದು ಅಕ್ರಮ ನಡೆಸುತ್ತಿದ್ದಾರೆ. ಶಾಸಕ ಹಾಗೂ ಬೆಂಬಲಿಗರನ್ನು ಕ್ಷೇತ್ರದಿಂದ ಹೊರಕ್ಕೆ ಹಾಕುವಂತೆ ಕಾಂಗ್ರೆಸ್ ಚುನಾವಣಾ ಪ್ರತಿನಿಧಿ ಜಿ.ರಘು ಅವರು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವುದಾಗಿ ಚುನಾವಣಾ ಅಧಿಕಾರಿ ತಿಳಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!