ಒಪ್ಪಂದ ರದ್ದಾದರೆ ‘ಫ್ಯೂಚರ್’ಗೆ ಬೀಗ?
ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್) ಜೊತೆಗಿನ ಒಪ್ಪಂದದ ಅನುಸಾರ ತನ್ನ ಕೆಲವು ವಹಿವಾಟುಗಳನ್ನು ಮಾರಾಟ ಮಾಡಲು ಸಾಧ್ಯವಾಗದೇ ಇದ್ದರೆ, ಕಂಪನಿಯ ಬಾಗಿಲು ಮುಚ್ಚಬೇಕಾಗುತ್ತದೆ ಎಂದು ಫ್ಯೂಚರ್ ರಿಟೇಲ್ ಲಿಮಿಟೆಡ್ (ಎಫ್ಆರ್ಎಲ್) ಹೇಳಿದೆ.
ಫ್ಯೂಚರ್ ಮತ್ತು ರಿಲಯನ್ಸ್ ನಡುವಿನ ಒಪ್ಪಂದವನ್ನು ಪ್ರಶ್ನಿಸಿ ಅಮೆಜಾನ್ ಕಂಪನಿಯು ಸಿಂಗಪುರದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ ಮೊರೆ ಹೋಗಿದೆ.
ಫ್ಯೂಚರ್ ಕಂಪನಿಯು ತನ್ನ ರಿಟೇಲ್, ಸಗಟು ಮಳಿಗೆಗಳು, ಸರಕು ಸಾಗಣೆ ವಹಿವಾಟುಗಳನ್ನು ರಿಲಯನ್ಸ್ಗೆ ಮಾರಾಟ ಮಾಡುವಂತಿಲ್ಲ ಎಂದು ಮಧ್ಯಸ್ಥಿಕೆ ಕೇಂದ್ರವು ತಡೆಯಾಜ್ಞೆ ನೀಡಿದೆ.
ಆದರೆ, ಈ ತಡೆಯಾಜ್ಞೆಗೆ ಪ್ರತಿಕ್ರಿಯೆಯಾಗಿ ಫ್ಯೂಚರ್ ಮತ್ತು ರಿಲಯನ್ಸ್ ಕಂಪನಿಗಳು ‘ನಮ್ಮಿಬ್ಬರ ನಡುವಿನ ಒಪ್ಪಂದವನ್ನು ವಿಳಂಬ ಮಾಡದೆಯೇ ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಹೇಳಿವೆ.
ಫ್ಯೂಚರ್ ಕಂಪನಿಯ ರಿಟೇಲ್ ವಿಭಾಗವು ದೇಶದಾದ್ಯಂತ 1,500ಕ್ಕೂ ಹೆಚ್ಚಿನ ಮಳಿಗೆಗಳನ್ನು ಹೊಂದಿದೆ. ‘ರಿಲಯನ್ಸ್ ಜೊತೆಗಿನ ಒಪ್ಪಂದದ ಪ್ರಕಾರ ನಮ್ಮ ಆಸ್ತಿಗಳನ್ನು ಆ ಕಂಪನಿಗೆ ಮಾರಾಟ ಮಾಡಲು ಸಾಧ್ಯವಾಗದೆ ಇದ್ದರೆ ನಾವು ಬಾಗಿಲು ಮುಚ್ಚಬೇಕಾಗುತ್ತದೆ. ಇದು ಸಹಸ್ರಾರು ಜನ ನೌಕರರ ಜೀವನೋಪಾಯಕ್ಕೆ ಏಟು ಕೊಡುತ್ತದೆ’ ಎಂದು ಫ್ಯೂಚರ್ ಕಂಪನಿಯು ಅಮೆಜಾನ್ ಅರ್ಜಿಗೆ ಪ್ರತಿವಾದ ಮಂಡಿಸುವ ಸಂದರ್ಭದಲ್ಲಿ ಮಧ್ಯಸ್ಥಿಕೆ ಕೇಂದ್ರಕ್ಕೆ ತಿಳಿಸಿದೆ.
‘ಫ್ಯೂಚರ್ ರಿಟೇಲ್ ಲಿಮಿಟೆಡ್ ಕಂಪನಿಯ ಬಾಗಿಲು ಮುಚ್ಚಿದರೆ 29 ಸಾವಿರಕ್ಕಿಂತ ಹೆಚ್ಚಿನ ನೌಕರರ ಜೀವನೋಪಾಯ ನಷ್ಟವಾದಂತೆ’ ಎಂದು ಕಂಪನಿ ಹೇಳಿದೆ.
ಮಧ್ಯಸ್ಥಿಕೆ ಕೇಂದ್ರ ನೀಡಿರುವ ಆದೇಶವು ಭಾರತದಲ್ಲಿ ತಕ್ಷಣಕ್ಕೆ ಜಾರಿಗೆ ಬರುವುದಿಲ್ಲ. ಅದು ಜಾರಿಗೆ ಬರಬೇಕು ಎಂದಾದರೆ ಆ ಆದೇಶವನ್ನು ಭಾರತದ ನ್ಯಾಯಾಲಯಗಳು ಅನುಮೋದಿಸಬೇಕು ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.