ನಾನು ಆರ್‌ಎಸ್‌ಎಸ್ ವಿರುದ್ಧ ಯಾವುದೇ ಚಳವಳಿ ಮಾಡಿಲ್ಲ, ನಾನು ನಿಷ್ಟಾವಂತ ಸ್ವಯಂ ಸೇವಕ- ಡಾ. ಧನಂಜಯ ಸರ್ಜಿ

ಉಡುಪಿ: ಮಾಜಿ ಶಾಸಕ ರಘುಪತಿ ಭಟ್ ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿರುದ್ಧವಾಗಿ ಬಂಡಾಯವಾಗಿ ಸ್ಪರ್ಧಿಸುವ ನಿಲುವು ತೆಗೆದುಕೊಳ್ಳುವುದಿಲ್ಲ ಎಂಬ ವಿಶ್ವಾಸ ಇದೆ. ಮತ್ತೆ ಅವರು ಪಕ್ಷದ ಜೊತೆ ಸೇರಿಕೊಳ್ಳುತ್ತಾರೆ ಎಂದು ವಿಧಾನ ಪರಿಷತ್ ನೈಋತ್ಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ.ಧನಂಜಯ ಸರ್ಜಿ ಹೇಳಿದ್ದಾರೆ.

ಉಡುಪಿ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆ.ರಘುಪತಿ ಭಟ್ ಅವರ ಬಗ್ಗೆ ಬಹಳ ಗೌರವ ಇದೆ. ಅವರು ಪಕ್ಷ ನಿಷ್ಠೆಯಿಂದ ನಡೆದುಕೊಂಡು ಬಂದವರು. ಅವರೊಂದಿಗೆ ಪಕ್ಷದ ಮುಖಂಡರು ಮಾತುಕತೆ ನಡೆಸಲಿದ್ದಾರೆ ಎಂದರು.

ಸಂಘಪರಿವಾರದ ವಿರುದ್ಧ ಚಳವಳಿ ನಡೆಸಿದ್ದಾರೆಂಬ ರಘುಪತಿ ಭಟ್ ಆರೋಪಕ್ಕೆ ಪ್ರತಿಕ್ರಿಯಿಸಿದ ಸರ್ಜಿ, ನಾನು ಆರ್‌ಎಸ್‌ಎಸ್ ವಿರುದ್ಧ ಯಾವುದೇ ಚಳವಳಿ ಮಾಡಿಲ್ಲ. ನಾನು ಆರ್‌ಎಸ್‌ಎಸ್‌ನ ನಿಷ್ಟಾವಂತ ಸ್ವಯಂ ಸೇವಕನಾಗಿದ್ದೇನೆ. ಶಿವಮೊಗ್ಗದ ಗಲಭೆಗೆ ಸಂಬಂಧಿಸಿ ಎಲ್ಲ ಧರ್ಮಗಳ ಗುರುಗಳು ಸೇರಿ ಶಾಂತಿಗಾಗಿ ನಡೆಸಿದ ಮೆರವಣಿಗೆ ಯಲ್ಲಿ ನಾನು ಭಾಗವಹಿಸಿದ್ದೇನೆ ಹೊರತು ಯಾವುದೇ ಸಂಘಟನೆಯ ವಿರುದ್ಧ ಅಲ್ಲ ಎಂದು ಸ್ಪಷ್ಟ ಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ, ಶಾಸಕರಾದ ಯಶ್‌ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್, ಮಾಜಿ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ, ಮುಖಂಡರಾದ ಉದಯ ಕುಮಾರ್ ಶೆಟ್ಟಿ, ಡಿ.ಎಸ್.ಅರುಣ್, ದಿನಕರ ಶೆಟ್ಟಿ ಹೆರ್ಗ, ಶಿಲ್ಪಾ ಸುವರ್ಣ, ಮಟ್ಟಾರ್ ರತ್ನಾಕರ್ ಹೆಗ್ಡೆ ಉಪಸ್ಥಿತರಿದ್ದರು.

ಪ್ರಜ್ವಲ್ ಪ್ರಕರಣ ಚುನಾವಣೆಗೆ ಪರಿಣಾಮ ಬೀರಲ್ಲ

ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ವಿಧಾನ ಪರಿಷತ್ ಚುನಾವಣೆ ಮೇಲೆ ಯಾವುದೇ ರೀತಿಯಲ್ಲೂ ಪರಿಣಾಮ ಬೀರಲ್ಲ. ಇದು ವೈಯಕ್ತಿಕವಾಗಿ ಮಾಡಿರುವ ತಪ್ಪು. ಒಬ್ಬ ಮಾಡಿದ ತಪ್ಪಿಗೆ ಇಡೀ ಪಕ್ಷ ಜವಾಬ್ದಾರಿ ಆಗುವುದಿಲ್ಲ ಎಂದು ನೈಋತ್ಯ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಭೋಜೇಗೌಡ ಹೇಳಿದರು.

ಹೆಣ್ಣು ಮಕ್ಕಳ ಈ ವಿಚಾರವನ್ನು ಗೌಪ್ಯವಾಗಿ ಇಡಬೇಕಾಗಿರುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಗೌಪ್ಯವಾಗಿಟ್ಟು ಕೊಂಡು ಸಂಬಂಧಪಟ್ಟ ತನಿಖಾ ತಂಡಗಳು ವಿಚಟಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವ ಕಾರ್ಯ ಮಾಡಬೇಕು. ಆ ಕೆಲಸ ಸರಕಾರದಿಂದ ಆಗಬೇಕು. ನಿಷ್ಪಕ್ಷಪಾತ ತನಿಖೆಗೆ ನಾವು ಯಾರು ಅಡ್ಡಿ ಪಡಿಸಿಲ್ಲ. ಒಳ್ಳೆಯ ಅಧಿಕಾರಿಗಳಿಗೆ ನಿಷ್ಪಕ್ಷ ಪಾತ ತನಿಖೆ ಆಗಲಿ ಎಂದು ಅವರು ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!