ರೇವಣ್ಣನನ್ನು ಬಂಧಿಸಿದ್ದೇವೆ, ಬ್ರಿಜ್ ಭೂಷಣ್, ಉನ್ನಾವೋ, ಹತ್ರಾಸ್ ಅತ್ಯಾಚಾರಿಗಳ ಬಂಧಿಸುವ ಧಮ್ಮು, ತಾಕತ್ತು ನಿಮಗಿದೆಯೇ?: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

Oplus_131072

ಬೆಂಗಳೂರು: ಲೈಂಗಿಕ ದೌರ್ಜನ್ಯ, ಅಪಹರಣ ಪ್ರಕರಣದಲ್ಲಿ ಆರೋಪಯಾಗಿದ್ದ ರೇವಣ್ಣನನ್ನು ನಾವು ಬಂಧಿಸಿದ್ದೇವೆ. ಬ್ರಿಜ್ ಭೂಷಣ್, ಉನ್ನಾವೋ, ಹತ್ರಾಸ್ ಅತ್ಯಾಚಾರಿಗಳನ್ನು ಬಂಧಿಸುವ ಧಮ್ಮು, ತಾಕತ್ತು ನಿಮಗಿದೆಯೇ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ವಣ್ಣ ಅವರ ಮೇಲಿನ ಲೈಂಗಿಕ ದೌರ್ಜನ್ಯ, ಸಂತ್ರಸ್ತೆಯೆ ಅಪಹರಣದ ಆರೋಪ ಪ್ರಕರಣವನ್ನು ವಿಶೇಷ ತನಿಖಾ ದಳದ ಮೂಲಕ ನಿಷ್ಪಕ್ಷಪಾತ, ಪಾರದರ್ಶಕ ತನಿಖೆಗೆ ಒಳಪಡಿಸಿ ನೊಂದವರ ಕಣ್ಣೀರು ಒರೆಸುವ ಪ್ರಯತ್ನವನ್ನು ಒಂದು ಸರ್ಕಾರವಾಗಿ ನಾವು ಮಾಡಿದ್ದೇವೆ. ಮಹಿಳೆಯರ ಬಗ್ಗೆ ಮೊಸಳೆ ಕಣ್ಣೀರು ಸುರಿಸುವ ಪ್ರಧಾನಿ ಮೋದಿ ಅವರೇ ಈಗ ನಿಮ್ಮ ಸರದಿ

ಮಹಿಳಾ ಕಾಳಜಿ ಬರೀ ನಿಮ್ಮ ಭಾಷಣಕ್ಕೆ ಸೀಮಿತವಲ್ಲ, ಕೃತಿಯಲ್ಲಿಯೂ ಇದೆ ಎನ್ನುವುದಾದರೆ ಬ್ರಿಜ್‌ಭೂಷಣ್ ಸಿಂಗ್, ಕುಲ್‌ದೀಪ್ ಸೆಂಗರ್‌ ರಂಥ ಮಹಿಳಾ ಪೀಡಕರು ಮಾಡಿರುವ ಪಾಪಕ್ಕೆ ತಕ್ಕ ಶಿಕ್ಷೆಯಾಗುವಂತೆ ಮಾಡಿ.ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು ಎಂದು ಹೇಳಿದ್ದಾರೆ.

ಈ ನಡುವೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸಿಎಂ, ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ನೀಡಿದರೆ ಸಂವಿಧಾನವನ್ನು ಬದಲಾವಣೆ ಮಾಡುವುದಾಗಿ ಬಿಜೆಪಿ ಹಾಗೂ ಆರ್ ಎಸ್ ಎಸ್ ಹೇಳುತ್ತಿದ್ದು, ಇವರಿಂದ ಸಂವಿಧಾನ ಉಳಿಸಬೇಕಾದ ಅನಿವಾರ್ಯ ಸ್ಥಿತಿ ಇದೆ. ಹಾಗಾಗಿ ಈ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಾಗಿದೆ. ಈ ಹೋರಾಟದಲ್ಲಿ ಕಾಂಗ್ರೆಸ್ ಗೆಲ್ಲಲಿದ್ದು, ಬಿಜೆಪಿ 200 ಸ್ಥಾನ ಗೆಲ್ಲುವುದೂ ಕಷ್ಟವಿದೆ ಎಂದು ಹೇಳಿದರು.

ಅಂಬೇಡ್ಕರ್ ಅವರು ನೀಡಿರುವ ಭಾರತೀಯ ಸಂವಿಧಾನವು ಎಲ್ಲರಿಗೂ ಸಮಾನ ಅವಕಾಶ, ಸಮ ಸಮಾಜದ ಗ್ಯಾರಂಟಿ ನೀಡುತ್ತದೆ. ಇದಕ್ಕೆ ವಿರುದ್ಧವಾಗಿ ಬಿಜೆಪಿಯವರು ನಡೆಯುತ್ತಿದ್ದಾರೆ. ಅಂಬೇಡ್ಕರ್ ಅವರು ದೇಶಕ್ಕೆ ಕೇವಲ ರಾಜಕೀಯ ಸ್ವಾತಂತ್ರ್ಯ ಸಾಕಾಗುವುದಿಲ್ಲ, ಎಲ್ಲರಿಗೂ ಆರ್ಥಿಕ, ಸಾಮಾಜಿಕ ಸ್ವಾತಂತ್ರ್ಯ ದೊರೆಯುವಂತಾಗಬೇಕು ಎಂದಿದ್ದಾರೆ. ಈ ಶಕ್ತಿಯನ್ನು ದುರ್ಬಲರಿಗೆ ತುಂಬವ ಸಲುವಾಗಿಯೇ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಗಳನ್ನು ಜಾರಿ ಮಾಡಿದೆ.

ರಾಜ್ಯದ ಬಡ ಜನರ ತುತ್ತಿನ ಚೀಲ ತುಂಬಿಸುವ ಅನ್ನಭಾಗ್ಯ ಯೋಜನೆಗಾಗಿ ಅಕ್ಕಿ ಪೂರೈಸಲು ಕೋರಿದಾಗ, ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಬಿಜೆಪಿ ಸರ್ಕಾರ ಅಕ್ಕಿ ನೀಡಲು ಒಪ್ಪಲಿಲ್ಲ. ಆದ್ದರಿಂದ ನಮ್ಮ ಸರ್ಕಾರ ಅಕ್ಕಿ ಬದಲು ಕೆಜಿಗೆ 34 ರೂ. ನಂತೆ 5 ಕೆ.ಜಿ ಗೆ 170 ರೂ. ಹಾಗೆ ಜುಲೈ ತಿಂಗಳಿನಿಂದ ಫಲಾನುಭವಿಗಳ ಖಾತೆಗೆ ಜಮೆ ಮಾಡುತ್ತಿದೆ.

ಗೃಹಜ್ಯೋತಿಯನ್ನು ಜುಲೈ ತಿಂಗಳಲ್ಲಿ ಜಾರಿ ಮಾಡಲಾಯಿತು. 1.60 ಕೋಟಿ ಫಲಾನುಭವಿಗಳಿಗೆ ಅಂದರೆ ರಾಜ್ಯದ ಸುಮಾರು 92% ಜನರಿಗೆ ಇದರಿಂದ ಲಾಭವಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ 1.21 ಕೋಟಿ ಮನೆ ಯಜಮಾನಿಯರಿಗೆ ತಲಾ 2,000 ರೂ.ನಂತೆ ಆಗಸ್ಟ್ ತಿಂಗಳಿನಿಂದ ಜಾರಿ ಮಾಡಲಾಯಿತು.

ನಿರುದ್ಯೋಗಿ ಪದವೀಧರರಿಗೆ 2 ವರ್ಷಗಳವರೆಗೆ ತಿಂಗಳಿಗೆ 3000 ರೂ. ಹಾಗೂ ಡಿಪ್ಲೋಮಾ ಮಾಡಿದವರಿಗೆ ತಲಾ 2000 ರೂ. ನೀಡುವ ಯುವನಿಧಿ ಯೋಜನೆಯನ್ನು ವಿವೇಕಾನಂದರ ಜನ್ಮದಿನಾಚರಣೆಯಂದು ಜಾರಿ ಮಾಡಲಾಯಿತು. ಈ ಅವಧಿಯಲ್ಲಿ ಬೇಡಿಕೆಯಿರುವ ತರಬೇತಿಯನ್ನು ಯುವಜನರಿಗೆ ನೀಡಿ, ಅವರಿಗೆ ಉದ್ಯೋಗ ದೊರೆಯಲು ಶಕ್ತಿ ತುಂಬಲಾಗುವುದು. ಹಿಂದೆಯೂ ನಾವು ನೀಡಿದ ಭರವಸೆಗಳನ್ನು ಈಡೇರಿಸಿದ್ದೆವು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ 5 ಗ್ಯಾರಂಟಿಗಳನ್ನು ನೀಡಿದ್ದು ಜನರಿಗೆ ವಿಶ್ವಾಸ ಬಂದಿದೆ. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ.

ಬಿಜೆಪಿಯವರು ಮೊದಲು ನಮ್ಮ ಗ್ಯಾರಂಟಿಗಳನ್ನು ಆಡಿಕೊಂಡರು. ಬಳಿಕ ಗ್ಯಾರಂಟಿಗಳನ್ನು ಜಾರಿ ಮಾಡಿದರೆ ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತದೆ ಎನ್ನುವ ಸುಳ್ಳು ಹರಡಿದರು. ಅಭಿವೃದ್ಧಿ ಕೆಲಸಗಳು ನಿಲ್ಲುತ್ತವೆ ಎಂದರು, ಲೋಕಸಭಾ ಚುನಾವಣೆ ತನಕ ಮಾತ್ರ ನೀಡಿ, ನಂತರ ನಿಲ್ಲಿಸುತ್ತಾರೆ ಎಂಬ ಸುಳ್ಳುಗಳನ್ನು ಸೃಷ್ಟಿಸಿದ್ದಾರೆ. ಬಜೆಟ್ ನಲ್ಲಿ ಗ್ಯಾರಂಟಿಗಳಿಗೆ 52,009 ಕೋಟಿ ರೂ.ಗನ್ನು ಇಟ್ಟಿದ್ದೇವೆ. ಅಭಿವೃದ್ಧಿ ಕೆಲಸಗಳಿಗೆ 68 ಸಾವಿರ ಕೋಟಿಗಳನ್ನೂ ಸೇರಿದಂತೆ 2024-25 ರಲ್ಲಿ ಒಟ್ಟು 1.20 ಲಕ್ಷ ಕೋಟಿ ಇಟ್ಟಿದ್ದೇವೆ.

ನಮ್ಮ ಸರ್ಕಾರದ ಬಜೆಟ್ ಗಾತ್ರ 3.71 ಲಕ್ಷ ಕೋಟಿ, ಬೊಮ್ಮಾಯಿಯವರ ಬಜೆಟ್ 23-24 ರಲ್ಲಿ 3.09 ಲಕ್ಷ ಕೋಟಿ. ಬಿಜೆಪಿಯವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದು, ಜನರಿಗೆ ಕಾಂಗ್ರೆಸ್ ನ ಮೇಲೆ ವಿಶ್ವಾಸ ಕಡಿಮೆಯಾಗಲಿ ಎಂದು ಹುನ್ನಾರ ಮಾಡುತ್ತಿದ್ದಾರೆ. ಬಿಜೆಪಿ ಅವರಿಗೆ ಗ್ಯಾರಂಟಿ ಯೋಜನೆಗಳನ್ನು ಕಂಡರೆ ಆಗುವುದಿಲ್ಲ. ಅದನ್ನು ನಿಲ್ಲಿಸಬೇಕೆಂಬುದು ಅವರ ಪಿತೂರಿಯಾಗಿದೆ. ಬಡವರು, ರೈತರು, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರ ಏಳಿಗೆ ಅವರಿಗೆ ಮುಖ್ಯವಲ್ಲ.

ಪ್ರಧಾನಿ ಮೋದಿ ಅವರು 10 ವರ್ಷಗಳಿಂದ ಯಾವುದೇ ಸಾಧನೆಗಳನ್ನು ಮಾಡಿಲ್ಲ. 2014 ರಲ್ಲಿ ನೀಡಿರುವ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ. ಆದರೆ ಮೋದಿಯವರು ದ್ವೇಷದ ಭಾಷಣ ಮಾಡುತ್ತಿದ್ದಾರೆ. ಮತಗಳ ಕ್ರೋಢೀಕರಣ, ಧರ್ಮದ್ವೇಷ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಆದ್ದರಿಂದ ರಾಹುಲ್ ಗಾಂಧಿ ಅವರು ದೇಶದ ಉದ್ದಗಲಕ್ಕೂ ಪಾದಯಾತ್ರೆ ಹಾಗೂ ನ್ಯಾಯ ಯಾತ್ರೆ ಮಾಡಿದರು. ದೇಶ ವಿಭಜನೆ ಮಾಡಲು ಮೋದಿಯವರು ಮಾಡಿರುವ ಪ್ರಯತ್ನಗಳಿಂದ ಬೇಸತ್ತಿದ್ದ ಜನರ ಒಡೆದ ಮನಸ್ಸನ್ನು ಒಗ್ಗೂಡಿಸಲು ಯಾತ್ರೆ ಕೈಗೊಂಡು ಯಶಸ್ವಿಯಾದರು.

ಕಾಂಗ್ರೆಸ್ ಪಕ್ಷ ನೀಡಿರುವ 25 ಗ್ಯಾರಂಟಿಗಳಿಗೆ ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಯವರು ಸಹಿ ಮಾಡಿ ಹಂಚಿದ್ದಾರೆ. ಬಡಕುಟುಂಬದ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಮಹಾಲಕ್ಷ್ಮಿ ಯೋಜನೆ, ಯುವನ್ಯಾಯದಡಿ ಮೊದಲ ಉದ್ಯೋಗದ ಜೊತೆಗೆ ವರ್ಷಕ್ಕೆ 1 ಲಕ್ಷ ರೂ. ನೀಡುವ ಯೋಜನೆ, ರೈತರ ಬೆಳೆಗೆ ನ್ಯಾಯಯುತ ಬೆಲೆ, ಸಾಲ ಮನ್ನಾ, ಸ್ವಾಮಿನಾಥನ್ ವರದಿ ಜಾರಿ ಬೇಡಿಕೆಗಳನ್ನು ಈಡೇರಿಸುವ ‘ರೈತ ನ್ಯಾಯ’ ಯೋಜನೆಗಳ ಭರವಸೆ ನೀಡಿದ್ದಾರೆ.

ಮೋದಿ ಅವರು ರೈತರ ಸಾಲ ಮನ್ನಾ ಮಾಡಲಿಲ್ಲ. ಸ್ವಾಮಿನಾಥನ್ ವರದಿ ಜಾರಿ ಮಾಡಲಿಲ್ಲ. ಆದರೆ ಅಂಬಾನಿ, ಅದಾನಿಗಳಿಗೆ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದರು. ರೈತರ ಸಾಲ ಮನ್ನಾ ಮಾಡಲು ನೋಟ್ ಪ್ರಿಂಟ್ ಮಾಡುವ ಮಿಷನ್ ಇಲ್ಲ ಎಂದು ಬಿಜೆಪಿಯವರು ಹೇಳುತ್ತಾರೆ. ಸಂಸದ ತೇಜಸ್ವಿ ಸೂರ್ಯ, ರೈತರ ಸಾಲ ಮನ್ನಾ ಮಾಡಿದರೆ ದೇಶಕ್ಕೆ ಒಳಿತಲ್ಲ ಎಂದಿದ್ದಾರೆ. ರೈತರ ಸಾಲ ಮನ್ನಾ ಮಾಡಬಾರದೆಂಬುದು ಬಿಜೆಪಿ ಅವರ ಹಿಡೆನ್ ಅಜೆಂಡಾ.

ಅವಕಾಶ ವಂಚಿತರಿಗೆ ನ್ಯಾಯ ನೀಡಲು, ಸರ್ಕಾರದ ಅನುಕೂಲ ದೊರಕಿಸಿಕೊಡಲು ಜಾತಿಗಣತಿ ಅತಿ ಮುಖ್ಯ. ಪಾಲುದಾರಿಕೆ ನ್ಯಾಯ, ಶ್ರಮಿಕ ನ್ಯಾಯ ಯೋಜನೆ ಗ್ಯಾರಂಟಿಗಳನ್ನು ಜಾರಿ ಮಾಡಲಾಗುವುದು. ಕರ್ನಾಟಕ ಹಾಗೂ ತೆಲಂಗಾಣದಲ್ಲಿ ಗ್ಯಾರಂಟಿಗಳನ್ನು ಜಾರಿ ಮಾಡಲಾಗಿದೆ. ಹೀಗೆ ದೇಶಾದ್ಯಂತ ಜಾರಿಯಾಗಲಿದೆ.

ಪ್ರಧಾನಿ ಮೋದಿ ಅವರು ಕರ್ನಾಟಕಕ್ಕೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರಾಜ್ಯದಿಂದ 4.30 ಲಕ್ಷ ಕೋಟಿ ತೆರಿಗೆ ಹೋಗುತ್ತದೆ. ಆದರೆ ರಾಜ್ಯಕ್ಕೆ 100 ರೂ. ಗೆ ಕೇವಲ 13 ರೂ. ಮರಳಿ ಬರುತ್ತಿದೆ. 11,495 ಕೋಟಿ ರೂ.ಗಳನ್ನು 15ನೇ ಹಣಕಾಸು ಆಯೋಗ ನಿರ್ಧರಿಸಿತ್ತು. ಭದ್ರಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡಲು ತಿಳಿಸಿದ್ದರೂ ಅವರು ಮಾಡಲಿಲ್ಲ. ರಾಜ್ಯಕ್ಕಾಗಿರುವ ಇಷ್ಟೆಲ್ಲಾ ಅನ್ಯಾಯವನ್ನು ರಾಜ್ಯದ 25 ಸಂಸದರಲ್ಲಿ ಯಾರೊಬ್ಬರೂ ಧ್ವನಿ ಎತ್ತಲಿಲ್ಲ. ಮೋದಿಯವರ ಎದುರು ನಿಂತು ಮಾತನಾಡಲು ಹೆದರುತ್ತಾರೆ. ಆದರೆ ಡಿ.ಕೆ.ಸುರೇಶ್ ಮಾತ್ರ ಪ್ರಶ್ನಿಸಿದ್ದರು.

ರಾಜ್ಯದ ಬಹುತೇಕ ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ. ಸೆಪ್ಟೆಂಬರ್ 23 ರಂದು ಬರಪರಿಹಾರಕ್ಕೆ ಮನವಿ ಮಾಡಲಾಗಿದೆ. ರೂ.18,172 ಕೋಟಿ ಎನ್ ಡಿ ಆರ್ ಎಫ್ ಮಾರ್ಗಸೂಚಿಯಂತೆ ಕೇಳಿದೆವು. 48 ಲಕ್ಷ ಹೆಕ್ಟೇರ್ ನಲ್ಲಿ ಬೆಳೆ ನಾಶವಾಗಿದೆ. ಕೇಂದ್ರ ತಂಡ ಬರಪರಿಹಾರ ಅಧ್ಯಯನ ಮಾಡಿದ್ದಾರೆ. ರಾಜ್ಯದ ಮಂತ್ರಿಗಳು , ನಾನು ಕೇಂದ್ರ ಸಚಿವರು, ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಕೋರಿದರೂ ಮನ್ನಣೆ ಸಿಗಲಿಲ್ಲ. ಆದ್ದರಿಂದ ಮನವಿ ಸಲ್ಲಿಸಿದ 7 ತಿಂಗಳ ನಂತರ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದೆವು. ಸುಪ್ರೀಂ ಕೋರ್ಟ್ ಚಾಟಿ ಬೀಸುವ ತನಕ ಒಂದು ರೂ. ಕೊಡಲಿಲ್ಲ. ರೂ.3,454 ಕೋಟಿ ನಂತರ ಕೊಟ್ಟರು.

Leave a Reply

Your email address will not be published. Required fields are marked *

error: Content is protected !!