ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ಏಕೆ ನಿಷ್ಕ್ರಿಯವಾಗಿದೆ: ಅಮಿತ್ ಶಾ

ಗುವಾಹಟಿ: ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಮೊಮ್ಮಗ ಮತ್ತು ಎನ್‌ಡಿಎ ಮೈತ್ರಿಕೂಟದ ಹಾಸನ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಲವಾರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಅಶ್ಲೀಲ ವಿಡಿಯೊ ಸಿಕ್ಕಿದೆ ಎನ್ನಲಾಗಿರುವ ಆರೋಪದ ಬಗ್ಗೆ, ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಇದುವರೆಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರಶ್ನಿಸಿದ್ದಾರೆ.

ಇಂದು ಅಸ್ಸಾಂನ ಗುವಾಹಟಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಮಿತ್ ಶಾ, ಈ ವಿಷಯದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಬಿಜೆಪಿ ಯಾವಾಗಲೂ ಮಾತೃಶಕ್ತಿಯ ಜೊತೆಗಿರುತ್ತದೆ ಎಂದರು.

ದೇಶದ ಮಾತೃಶಕ್ತಿಯೊಂದಿಗೆ ನಾವು ನಿಂತಿದ್ದೇವೆ ಎಂಬುದು ಬಿಜೆಪಿಯ ನಿಲುವಾಗಿದೆ. ನಾನು ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಒಂದು ಕೇಳಲು ಬಯಸುತ್ತೇನೆ. ಕರ್ನಾಟಕದಲ್ಲಿ ಯಾರ ಸರ್ಕಾರವಿದೆ, ಅಲ್ಲಿರುವ ಸರ್ಕಾರ ಕಾಂಗ್ರೆಸ್ ಪಕ್ಷದ್ದು, ಅವರು ಇಲ್ಲಿಯವರೆಗೆ ಏಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ರಾಜ್ಯದ ಕಾನೂನು ಸುವ್ಯವಸ್ಥೆ ಸಮಸ್ಯೆಯಾಗಿ ರುವುದರಿಂದ ಈ ಬಗ್ಗೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.

ಪ್ರಕರಣದ ತನಿಖೆಗೆ ಬಿಜೆಪಿ ಒಲವು ತೋರುತ್ತಿದೆ, ನಮ್ಮ ಮೈತ್ರಿ ಪಾಲುದಾರ ಜೆಡಿಎಸ್ ಕೂಡ ಪಕ್ಷದ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ ಎಂದರು.

ಇದು ತುಂಬಾ ಗಂಭೀರವಾದ ಆರೋಪವಾಗಿದೆ. ಬಿಜೆಪಿ ಇಂತಹ ಪ್ರಕರಣವನ್ನು ಬೆಂಬಲಿಸುವುದೂ ಇಲ್ಲ, ಪ್ರೋತ್ಸಾಹಿಸುವುದೂ ಇಲ್ಲ, ನಾನು ಈ ಸಂದರ್ಭದಲ್ಲಿ ಕಾಂಗ್ರೆಸ್ ನ್ನು ಒಂದು ವಿಚಾರ ಕೇಳಲು ಬಯಸುತ್ತೇನೆ, ಅಧಿಕಾರದಲ್ಲಿದ್ದರೂ ಸರ್ಕಾರ ಇನ್ನೂ ಏಕೆ ಕ್ರಮ ಕೈಗೊಂಡಿಲ್ಲ? ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಕರ್ನಾಟಕದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಅವರನ್ನು ಈ ವಿಚಾರದಲ್ಲಿ ಕೇಳಬೇಕು ಎಂದರು.

ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪ ಮಾಡಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಕಲಬುರಗಿಯ ಸೇಡಂನಲ್ಲಿ ಚುನಾವಣಾ ಪ್ರಚಾರ ವೇಳೆ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರ ಮೇಲೆ ಆರೋಪ ಮಾಡಿದ್ದರು.

Leave a Reply

Your email address will not be published. Required fields are marked *

error: Content is protected !!