ಯಾವ ಸೀಮೆಯ ಓಬಿಸಿ ನಾಯಕ ?: ಸಿದ್ದರಾಮಯ್ಯಗೆ ಸುನಿಲ್ ಕುಮಾರ್ ಪ್ರಶ್ನೆ
ಉಡುಪಿ: ಸಿದ್ದರಾಮಯ್ಯನವರೇ ಹಿಂದುಳಿದ ವರ್ಗದ ರಾಜಕೀಯ ಮೀಸಲಾತಿಗೆ ಕಣ್ಣೆದುರೇ ಅನ್ಯಾಯವಾಗುತ್ತಿದ್ದರೂ ಮುಸ್ಲಿಂ ಹಿತಾಸಕ್ತಿ ರಕ್ಷಣೆಯ ವ್ರತಧಾರಿಯಂತೆ ವರ್ತಿಸುತ್ತಿರುವ ನೀವು ಯಾವ ಸೀಮೆಯ ಹಿಂದುಳಿದ ವರ್ಗದ ನಾಯಕ ? ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನೀಲ್ ಕುಮಾರ್ ಪ್ರಶ್ನಿಸಿದ್ದಾರೆ.
ಓಬಿಸಿ ಮೀಸಲು ಹಕ್ಕನ್ನು ಮುಸಲ್ಮಾನರಿಗೆ ಹಂಚುತ್ತಿರುವ ನಿಮ್ಮ ನಿರ್ಧಾರದ ಬಗ್ಗೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ ಆಕ್ಷೇಪಿಸಿರುವುದು ಸಮಂಜಸವಾಗಿದೆ. ಮುಸ್ಲಿಂರಿಗೆ ಧರ್ಮಾಧಾರಿತವಾಗಿ ನೀಡುತ್ತಿದ್ದ ಮೀಸಲು ಸೌಲಭ್ಯವನ್ನು ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದಾಗ ಹಿಂಬಾಗಿಲ ಮೂಲಕ ಆ ನಿರ್ಧಾರಕ್ಕೆ ಅಡ್ಡಿ ತಂದವರು ನೀವಲ್ಲವೇ ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಮ್ಮ ಸರ್ಕಾರ ಮುಸ್ಲಿಂ ಮೀಸಲಾತಿಯನ್ನು ರದ್ದು ಮಾಡಿದಾಗ ಅದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ ಪ್ರೊ.ರವಿವರ್ಮ ಕುಮಾರ್ ಸಿದ್ದರಾಮಯ್ಯನವರ ಅತ್ಯಾಪ್ತರು. ಈ ರೀತಿ ಅರ್ಜಿ ಸಲ್ಲಿಸುವುದಕ್ಕೆ ಮೂಲ ಪ್ರೇರಣೆ ಸಿದ್ದರಾಮಯ್ಯನವರು. ಒಂದೊಮ್ಮೆ ನಿಮಗೆ ಹಿಂದುಳಿದ ವರ್ಗಗಳ ಮೇಲೆ ಕಾಳಜಿ ಇದ್ದಿದ್ದರೆ ಈ ಅರ್ಜಿಯ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯ ಸರ್ಕಾರದ ಪರವಾಗಿ ವಾದ ಹೂಡುತ್ತಿದ್ದಿರಿ. ಅದನ್ನು ಬಿಟ್ಟು ನಿಮ್ಮ ಸಂಚು ಬಯಲು ಮಾಡಿದ ಪ್ರಧಾನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವುದನ್ನು ನೋಡಿದರೆ ನೀವು ಹಿಂದುಳಿದ ವರ್ಗಗಳ ಪರವೋ ? ಮುಸ್ಲಿಂರ ಪರವೋ ? ಎಂಬುದು ಅರ್ಥವಾಗುತ್ತದೆ ಎಂದು ಆರೋಪಿಸಿದ್ದಾರೆ.
ಹಿಂದುಳಿದ ವರ್ಗಗಳಿಗೆ ಸೇರಿದ ನೂರಾರು ಸಣ್ಣ ಸಣ್ಣ ಉಪಜಾತಿಗಳಿಗೆ ಒಂದು ಗ್ರಾಮ ಪಂಚಾಯಿತಿ ಸದಸ್ಯರಾಗುವ ಅವಾಶವೂ ಸಿಕ್ಕಿಲ್ಲ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವರಿಗಾಗಿ ಮೀಸಲು ವರ್ಗೀಕರಣ ಮಾಡಬೇಕೆಂದು ನ್ಯಾ. ಭಕ್ತವತ್ಸಲಂ ಸಮಿತಿ ಶಿಫಾರಸು ಮಾಡಿತ್ತು. ಆದರೆ ನಿಮ್ಮ ಸರ್ಕಾರ ಇದನ್ನು ಒಪ್ಪಿಕೊಳ್ಳದೇ ಇದ್ದಿದ್ದು ಯಾಕೆ ? ಇದರಿಂದ ಮುಸ್ಲಿಂ ಮೀಸಲಾತಿಗೆ ಧಕ್ಕೆ ಬರುತ್ತದೆ ಎಂಬ ಕಾರಣಕ್ಕಲ್ಲವೇ ? ಎಂದು ಪ್ರಶ್ನಿಸಿದ್ದಾರೆ.
ಧರ್ಮಾಧರಿತ ಮೀಸಲು ಸೌಲಭ್ಯಕ್ಕೆ ಸಂವಿಧಾನದಲ್ಲಿ ಅವಕಾಶವೇ ಇಲ್ಲ. ಆದಾಗಿಯೂ ಮುಸ್ಲಿಂ ಮೀಸಲಾತಿ ಮುಂದುವರಿಸುತ್ತೇನೆ ಎಂಬುದು ಸಂವಿಧಾನದ ಆಶಯಕ್ಕೆ ವಿರುದ್ಧ. ಕಾನೂನು ಪಂಡಿತರಂತೆ ವರ್ತಿಸುವ ನೀವು ಸಂವಿಧಾನದ ಆಶಯಗಳನ್ನು ಮನಬಂದಂತೆ ವ್ಯಾಖ್ಯಾನಿಸಿ ಅನುಷ್ಠಾನ ಗೊಳಿಸುವುದು ಎಷ್ಟು ಸರಿ ? ಹಿಂದುಳಿದ ವರ್ಗಕ್ಕೆ ಶತಮಾನಗಳಿಂದ ಆಗುತ್ತಿರುವ ಅನ್ಯಾಯವನ್ನು ಪೋಷಿಸುವ ನೀವು ಈ ಕೂಡಲೇ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು. ಜತೆಗೆ ಮುಸ್ಲಿಂ ಮೀಸಲಾತಿ ರದ್ದು ಮಾಡಿದ್ದನ್ನು ಪ್ರಶ್ನಿಸಿ ನೀವು ಹಿಂಬಾಗಿಲ ಮೂಲಕ ಸಲ್ಲಿಸಿದ ಅರ್ಜಿಯನ್ನು ತಕ್ಷಣ ವಾಪಾಸ್ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.