ಬಿಜೆಪಿ ಪ್ರಚಾರ ಪುಸ್ತಕದಲ್ಲಿ ಪ್ರಮೋದ್ ಮಧ್ವರಾಜ್ ಫೋಟೋಗೆ ಕೋಕ್- ಅಭಿಮಾನಿಗಳು ಗರಂ
ಉಡುಪಿ: ಬಿಜೆಪಿ ಪಕ್ಷಕ್ಕೆ ಬಲ ತುಂಬಿದ, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯ ಎಲ್ಲಾ ಸ್ಥಾನಗಳಲ್ಲಿ ಕೂಡ ಬಿಜೆಪಿ ಗೆಲ್ಲುವಂತೆ ಶ್ರಮ ವಹಿಸಿದ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ರವರಿಗೆ ಅವರಿಗೆ ಗೌರವಯುತವಾಗಿ ಸಿಗಬೇಕಾಗಿದ್ದ ಲೋಕ ಸಭಾ ಚುನಾವಣೆ ಟಿಕೆಟ್ ನಿರಾಕರಿಸಿದ್ದು ಮಾತ್ರ ಅಲ್ಲ ಈಗ ನಡೆಯುವ ಚುನಾವಣಾ ಪ್ರಕ್ರಿಯೆಗಳಲ್ಲಿ ಎಲ್ಲಿ ಕೂಡ ಅವರ ಭಾವಚಿತ್ರ ಮುದ್ರಿಸದೆ ಅವರ ಸ್ಥಾನಮಾನಕ್ಕೆ ತಕ್ಕ ಗೌರವ ನೀಡುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಪ್ರಮೋದ್ ಅಭಿಮಾನಿ ಬಳಗದ ಬಹಳಷ್ಟು ಕಾರ್ಯಕರ್ತರು ಬೇಸರ ವ್ಯಕ್ತಪಡಿಸಿದ್ದಾರೆ.
ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕೇವಲ ಉಡುಪಿ ಜಿಲ್ಲೆ ಮಾತ್ರವಲ್ಲ, ಕರ್ನಾಟಕದ ಎಲ್ಲೆಡೆ ಪ್ರಚಾರ ಮಾಡಿ, ಬಿಜೆಪಿ ಪರ ಕೆಲಸ ಮಾಡಿದ್ದು ಮಾತ್ರವಲ್ಲದೆ, ಅದರ ನಂತರ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಎಲ್ಲೆಡೆ ಸಂಚರಿಸಿ ಕಾರ್ಯಕರ್ತರನ್ನು ಒಗ್ಗೂಡಿಸಿ ಲೋಕ ಸಭಾ ಚುನಾವಣೆಗೆ ಸಿದ್ದ ಮಾಡಿದ್ದರು ಪ್ರಮೋದ್ ಮಧ್ವರಾಜ್.
ಆದರೆ ಈಗ ಅವರನ್ನು ಉದ್ದೇಶ ಪೂರ್ವಕವಾಗಿ ದೂರ ಇಡುತ್ತಿದ್ದು ಯಾವುದೇ ಬ್ಯಾನರ್ ಅಥವಾ ಬಿತ್ತಿ ಪತ್ರದಲ್ಲಿ ಅವರ ಹೆಸರು ಮತ್ತು ಭಾವ ಚಿತ್ರ ಹಾಕದೆ ಇರುವುದು ಅವರ ಅಭಿಮಾನಿಗಳಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
ಲೋಕ ಸಭಾ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಾ?
ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ತಾನು ಸಚಿವನಾಗಿದ್ದಾಗ ಪಕ್ಷಾತೀತವಾಗಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿಕೊಟ್ಟು ತದನಂತರ ಬಿಜೆಪಿ ಸೇರಿದ ಇವರಿಗೆ ವಿಧಾನ ಸಭಾ ಚುನಾವಣೆಯಲ್ಲಿ ಕೂಡ ಅವಕಾಶ ನೀಡದೆ, ಈಗ ಲೋಕ ಸಭಾ ಚುನಾವಣೆಯಲ್ಲಿ ಕೂಡ ಅವಕಾಶ ನೀಡದೆ ಮತ್ತೆ ಈಗ ಅವರ ಯಾವುದೇ ಭಾವಚಿತ್ರ ಹಾಕದೆ ಅವರನ್ನು ಉದ್ದೇಶಪೂರ್ವಕವಾಗಿ ಬಿಜೆಪಿಯಿಂದ ದೂರ ಇಡುವ ಪ್ರಯತ್ನ ಆಗುತ್ತಿದೆ ಎಂಬ ಸಂಶಯ ಅವರ ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ.
ಆದರೂ ಅವರು ಅದನ್ನು ಸಾರ್ವಜನಿಕವಾಗಿ ತೋರ್ಪಡಿಸದೆ ಸಭೆಯ ಸಮಾರಂಭಕ್ಕೆ ತನಗೆ ಆಹ್ವಾನ ನೀಡದಿದ್ದರೂ ಕೂಡ ಭಾಗವಹಿಸುತ್ತಿದ್ದಾರೆ. ನಿನ್ನೆ ನಡೆದ ಬ್ರಹ್ಮಾವರ ರೋಡ್ ಶೋ ಕಾರ್ಯಕ್ರಮದಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರೂ ಕೂಡ ಸಭೆಯಲ್ಲಿ ಪ್ರಮೋದ್ ಮಧ್ವರಾಜ್ ಅವರನ್ನು ಗುರುತಿಸದೆ ಅವಮಾನ ಮಾಡಿದ್ದಾರೆ ಎಂದು ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.