ಅನುಮತಿಯಿಲ್ಲದೆ ಪೋಸ್ಟರ್ ಅಂಟಿಸಿದ ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಚುನಾವಣಾ ಅಧಿಕಾರಿಯಿಂದ ಪೂರ್ವಾನುಮತಿಯನ್ನು ಪಡೆಯದೆ ಹಾಗೂ ಕರಪತ್ರದಲ್ಲಿ ಮುದ್ರಣ ಕುರಿತು ಪ್ರಕಾಶಕರ ವಿವರ ನಮೂದಿಸದೇ ಪೋಸ್ಟರ್ ಅಭಿಯಾನ ನಡೆಸಿದ ಬಿಜೆಪಿ ಯುವ ಮೋರ್ಚಾದ ಮುಖಂಡರ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಜೆಪಿ ಯುವ ಮೋರ್ಚಾದ ವತಿಯಿಂದ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಅಭಿಯಾನವನ್ನು ನಗರದಲ್ಲಿ ಎ.23 ರಂದು ಹಮ್ಮಿಕೊಳ್ಳಲಾಗಿತ್ತು. ಬನ್ನಂಜೆ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಪ್ಲಾಟ್ ಫಾರ್ಮ್ ಕಂಬಗಳಿಗೆ ಹಾಗೂ ಕರಾವಳಿ ಬೈಪಾಸ್ ನ ಅಂಡರ್ ಪಾಸ್ ಗಳ ಗೋಡೆಯ ಮೇಲೆ ಕಾರ್ಯಕರ್ತರು ಪೋಸ್ಟರ್ ಗಳನ್ನು ಅಂಟಿಸಿದ್ದರು.
ಇವರು ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಪೂರ್ವಾನುಮತಿಯನ್ನು ಪಡೆದುಕೊಳ್ಳದೆ ಹಾಗೂ ಕರಪತ್ರದಲ್ಲಿ ಮುದ್ರಣ ಕುರಿತಂತೆ ಪ್ರಕಾಶಕರ ವಿವರ ನಮೂದಿಸದೇ ಒಂದು ಪಕ್ಷದ ವಿರುದ್ಧವಾಗಿ ಮುದ್ರಿಸಿರುವ ಪೋಸ್ಟರ್ ಗಳನ್ನು ಅಂಟಿಸಿರುವುದು ಕಂಡುಬಂದಿದ್ದು, ಇದರ ನೇತೃತ್ವ ವಹಿಸಿದ್ದ ಉಡುಪಿ ನಗರ ಬಿಜೆಪಿ ಯುವ ಮೋರ್ಚಾದ ಶ್ರೀವತ್ಸಾ, ಶಿವಪ್ರಸಾದ್, ಧನುಷ್ ಹಾಗೂ ಇತರರ ವಿರುದ್ಧ ಉಡುಪಿ ವಿಧಾನ ಸಭಾ ಕ್ಷೇತ್ರದ ಫೈಯಿಂಗ್ ಸ್ಕ್ಯಾಡ್ ಟೀಂನ ಅಧಿಕಾರಿ ಗೌತಮ್ ಶಾಸ್ತ್ರಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.