ಒಂದೇ ದಿನ 608 ಅರ್ಜಿಗಳು ಇತ್ಯರ್ಥ: ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ದಾಖಲೆ

Oplus_131072

ಬೆಂಗಳೂರು: ಹೈಕೋರ್ಟ್‌ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಒಂದು ದಿನದ ಕಲಾಪದ ಅವಧಿಯಲ್ಲಿ ವಿವಿಧ ಪ್ರಕಾರಗಳ 608 ಅರ್ಜಿಗಳನ್ನು ಅದೇ ದಿನವೇ ವಿಲೇವಾರಿ ಮಾಡುವ ಮೂಲಕ ಕರ್ನಾಟಕ ಹೈಕೋರ್ಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.

ಹೈಕೋರ್ಟ್‌ನ ಬೆಂಗಳೂರು ಪೀಠದ ಕೋರ್ಟ್‌ ಹಾಲ್‌ ಸಂಖ್ಯೆ 23ರಲ್ಲಿ ಕುಳಿತಿದ್ದ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಪ್ರಕರಣದ ಪಟ್ಟಿಯಲ್ಲಿ (ಕಾಸ್‌ ಲಿಸ್ಟ್‌) ನಮೂದಾಗಿದ್ದ ಎಲ್ಲಾ 608 ಅರ್ಜಿಗಳನ್ನೂ ದಿನದ ಕಲಾಪದ ಅವಧಿಯಲ್ಲಿ ವಿಲೇವಾರಿ ಮಾಡಿದರು.

ಇದರಲ್ಲಿ ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಕಾಯಿದೆಯ ಸಿಂಧುತ್ವ ಪ್ರಶ್ನಿಸಿ ಒಟ್ಟಾರೆ 603 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇಷ್ಟು ಪ್ರಕರಣಗಳು ಒಂದನೇ ಪಟ್ಟಿಯಲ್ಲಿದ್ದರೆ, ಎರಡನೇ ಪಟ್ಟಿಯಲ್ಲಿ 183 ಅರ್ಜಿಗಳಿದ್ದವು. ಮೂರನೇ ಪಟ್ಟಿಯು ಕಾಯ್ದಿರಿಸಿದ್ದ ಅರ್ಜಿಗಳ ತೀರ್ಪಿಗೆ ಸಂಬಂಧಿಸಿದ್ದಾಗಿದ್ದವು.

ಹೈಕೋರ್ಟ್‌ನಲ್ಲಿ ಇತರೆ ನ್ಯಾಯಮೂರ್ತಿಗಳ ಅರ್ಜಿ ವಿಲೇವಾರಿ ಪ್ರಮಾಣ ವರ್ಷವೊಂದಕ್ಕೆ ಸರಾಸರಿ 750 ಅರ್ಜಿಗಳಷ್ಟಿದೆ ಎನ್ನಲಾಗಿದ್ದು, ನ್ಯಾಯಮೂರ್ತಿ ನಾಗಪ್ರಸನ್ನ ಅವರು ಕಳೆದ 15 ವಾರಗಳಲ್ಲಿ 2 ಸಾವಿರ ಅರ್ಜಿಗಳನ್ನು ವಿಲೇವಾರಿ ಮಾಡಿದ ಹೆಗ್ಗಳಿಕೆ ಹೊಂದಿದ್ದಾರೆ.

2023ರ ಜೂನ್‌ 12ರ ವಿಚಾರಣೆಯಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಭರ್ತಿ 522 ಪ್ರಕರಣಗಳನ್ನು ವಿಚಾರಣೆ ನಡೆಸಿದ್ದರು. ಅದಕ್ಕೂ ಕೆಲವು ತಿಂಗಳ ಹಿಂದೆ ಇದೇ ನ್ಯಾಯಮೂರ್ತಿಗಳ ಮುಂದೆ 480ಕ್ಕೂ ಅಧಿಕ ಪ್ರಕರಣಗಳನ್ನು ಪಟ್ಟಿ ಮಾಡಲಾಗಿತ್ತು. ಬಹುತೇಕ ಎಲ್ಲಾ ಪ್ರಕರಣಗಳನ್ನು ಅಂದು ನ್ಯಾ. ನಾಗಪ್ರಸನ್ನ ಅವರು ವಿಚಾರಣೆ ನಡೆಸಿದ್ದರು.

ನಾಗಪ್ರಸನ್ನ ಅವರು 2019ರ ನವೆಂಬರ್ 26ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡು 2021ರ ಸೆಪ್ಟಂಬರ್ 8ರಂದು ಕಾಯಂಗೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!