ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವಿಗೆ ಬೀಳುತ್ತಾ ಬ್ರೇಕ್!
ಉಡುಪಿ, (ಉಡುಪಿ ಟೈಮ್ಸ್ ವರದಿ) ಕಳೆದ ಎರಡು ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಭರ್ಜರಿ ಜಯಭೇರಿ ಬಾರಿಸಿದ್ದ ಕಮಲ ಪಾಲಯದಲ್ಲಿ ಈ ಬಾರಿ ಸಂಘಟಿತ ಹೋರಾಟವಿಲ್ಲದೆ ಗೆಲುವಿನ ಸನಿಹದಲ್ಲಿ ಮುಗ್ಗರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಕಳೆದ ಹತ್ತು ವರ್ಷ ಉಡುಪಿ ಜಿಲ್ಲೆಯಲ್ಲಿ ಮೋದಿ ಹೆಸರಲ್ಲಿ ಗೆದ್ದು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಇರುವುದರಿಂದ ಮತದಾರರು ಈ ಬಾರಿ ಬದಲಾವಣೆ ಬಯಸಿದ್ದಾರೆ. ಇದಕ್ಕೆ ಪುಷ್ಠಿ ನೀಡುವಂತೆ ಮತ್ತೆ ಬಿಜೆಪಿ ಸಂಸತ್ತಿನಲ್ಲಿ ಸಮಗ್ರವಾಗಿ ಮಾತನಾಡುವಂತಹ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಇರುವುದು ಇಲ್ಲಿನ ಬಿಜೆಪಿ ನಾಯಕರಿಗೂ ಅಸಮಾಧಾನ ಇದೆ.
ಕೋಟಗೆ ಉಡುಪಿ ಜಿಲ್ಲಾ ಉಸ್ತುವಾರಿ ನೀಡದಂತೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದ ಶಾಸಕರು ತಟಸ್ಥ!
ಈ ಹಿಂದೆ ಯಡಿಯೂರಪ್ಪ ಮುಖ್ಯ ಮಂತ್ರಿಯಾಗಿದ್ದಾಗ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ನೀಡದಂತೆ ಉಡುಪಿಯ ಐವರೂ ಬಿಜೆಪಿ ಶಾಸಕರು ಪತ್ರ ಬರೆದಿದ್ದರು. ಈಗ ಇವರೆಲ್ಲರೂ ಕೋಟ ಚುನಾವಣಾ ಪ್ರಚಾರದಲ್ಲಿ ನೀರಾಸಕ್ತಿ ತೋರಿಸುತ್ತಿದ್ದಾರೆ ಎಂದು ಕಾರ್ಯಕರ್ತರು ತಿಳಿಸಿದ್ದಾರೆ.
ಕೋಟ ಶ್ರೀನಿವಾಸ್ ಪೂಜಾರಿಯವರಿಂದ ಬಿಲ್ಲವ ಸಮುದಾಯಕ್ಕೆ ಶೂನ್ಯ ಕೊಡುಗೆ….
ಕಳೆದ ನಾಲ್ಕು ಅವಧಿಯಲ್ಲಿ ವಿಧಾನ ಪರಿಷತ್ಗೆ ಆಯ್ಕೆಯಾಗಿದ್ದ ಕೋಟ ಅವರು, ಸಚಿವರಾಗಿ, ವಿವಿಧ ಇಲಾಖೆಯ ಮಂತ್ರಿಯಾಗಿ ಕರಾವಳಿ ಭಾಗದ ಬಹುಸಂಖ್ಯಾತ ತನ್ನ ಸಮುದಾಯದ ಏಳಿಗೆಗಾಗಿ ಏನು ಕಾರ್ಯಯೋಜನೆ ರೂಪಿಸದೆ ಇರುವುದು ಬಿಲ್ಲವ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.
ಅಷ್ಟೇ ಅಲ್ಲದೆ ಗಣರಾಜ್ಯೋತ್ಸವ ಪೆರೇಡ್ನಲ್ಲಿ ನಾರಾಯಣ ಗುರುಗಳ ಸ್ತಭ್ತಚಿತ್ರ ನಿರಾಕರಣೆ ಸಂದರ್ಭದಲ್ಲೂ ಕೇಂದ್ರ, ರಾಜ್ಯ ಸರಕಾರದಲ್ಲಿ ಒತ್ತಡ ತಂದು ತನ್ನ ಸಮುದಾಯಕ್ಕೆ ಆದ ದೊಡ್ಡ ಅವಮಾನವನ್ನು ತಡೆಯುವಲ್ಲಿ ವಿಫಲವಾಗಿದ್ದು, ಪಠ್ಯಪುಸ್ತಕದಲ್ಲಿ ನಾರಾಯಣ ಗುರುಗಳಿಗೆ ಕೋಕ್ ಕೊಟ್ಟಾಗಲೂ ಸರಕಾರದ ಪರ ಸಮರ್ಥನೆ ಮಾಡಿರುವುದು ಬಿಲ್ಲವ ಸಂಘಟನೆಗಳು ಕೋಟ ವಿರುದ್ಧ ಭಾರೀ ಅಸಮಾಧಾನ ಇದ್ದು ಈ ಚುನಾವಣೆಯಲ್ಲಿ ತಕ್ಕ ಪಾಠಕಲಿಸುವ ಸಾಧ್ಯತೆ ಇದೆ.