ಸಂತೆಕಟ್ಟೆ ರಾ.ಹೆದ್ದಾರಿ ಸಂಚಾರಕ್ಕೆ ಮುಕ್ತ: ಏನೇ ಅನಾಹುತವಾದರೇ ಸಂಸದೆ, ಶಾಸಕರೇ ಹೊಣೆ- ಕಾಂಚನ್

ಉಡುಪಿ: ವರ್ಷವಿಡೀ ಗೊಗರೆದರೂ ಕೂಡ ಕ್ಯಾರೇ ಮಾಡದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತರಾತುರಿಯಲ್ಲಿ ಅರ್ಧಂಬರ್ಧ ಕೆಲಸ ಮಾಡಿ ಸಂತೆಕಟ್ಟೆ ಅಂಡರ್ ಪಾಸ್ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿರುವುದು ಚುನಾವಣಾ ಗಿಮಿಕ್ ಆಗಿದೆ. ಇಲ್ಲಿನ ಅರ್ಧಂಬರ್ಧ ಕಾಮಗಾರಿಯಿಂದಾಗಿ ಜೀವ ಹಾನಿ ಅಥವಾ ಯಾವುದೇ ನಷ್ಠಗಳು ಸಂಭವಿಸಿದರೆ ಅದಕ್ಕೆ ಆಗಿನ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇರ ಹೊಣೆ ಮಾಡುವಂತೆ ರಾಜ್ಯ ಸರ್ಕಾರವನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಆಗ್ರಹಿಸಿದ್ದಾರೆ.

ಯಾವುದೇ ರೀತಿಯ ಸೂಕ್ತ ವ್ಯವಸ್ಥೆ ಮಾಡದೇ ರಸ್ತೆಯನ್ನು ಅಗೆದು ಆಳೆತ್ತರದ ಗುಂಡಿ ತೋಡಿ ಕಳೆದ ಮಳೆಗಾಲದಲ್ಲಿ ರಸ್ತೆಯ ಒಂದು ಭಾಗದ ಸರ್ವಿಸ್ ರಸ್ತೆ ಕುಸಿದ ಪಕ್ಕದ ಕಟ್ಟಡಗಳಿಗೆ ಅಪಾಯವನ್ನು ತಂದೊಂಡಿದ್ದು ಈಗ ಒಂದು ಭಾಗಕ್ಕೆ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿ ಇನ್ನೊಂದು ಭಾಗದಲ್ಲಿ ಮಣ್ಣಿನ ಗೋಡೆಯನ್ನು ಇಟ್ಟು ಮಧ್ಯ ಭಾಗದಲ್ಲಿ ವಾಹನ ಸಂಚಾರಕ್ಕೆ ಅವಕಾಶ ಮಾಡಿ ಕೊಡಲಾಗಿದೆ. ಮೊನ್ನೆ ಸುರಿದ ಮೊದಲ ಮಳೆಗೆ ಒಂದು ಭಾಗದ ಮಣ್ಣು ಮೆದುವಾಗಿ ತಡೆಗೋಡೆ ಕುಸಿಯುವ ಆತಂಕ ಕಾಡುತ್ತಿದೆ. ಇದಲ್ಲದೆ ಕಾಂಕ್ರೀಟ್ ತಡೆಗೋಡೆಗೆ ಅಳವಡಿಸಿದ ಕಬ್ಬಿಣದ ರಾಡ್ ಗಳು ಹಾಗೆಯೇ ಹೊರಗಡೆ ತೆರೆದುಕೊಂಡಿದ್ದು, ರಸ್ತೆಯ ಪಕ್ಕದ ಚರಂಡಿಯ ರಾಡ್‌ಗಳು ಕೂಡ ಮೇಲೆ ಎದ್ದು ಕಾಣುತ್ತಿದ್ದು ಇದರಿಂದ ವಾಹನ ಸವಾರರಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ.

ಈ ನಡುವೆ ಕೆಮ್ಮಣ್ಣು, ಸಂತೆಕಟ್ಟೆ ಪರಿಸರದವರು ಬಸ್ ಹತ್ತಲು ಬರಬೇಕಾದರೆ ಒಂದು ಕಿಲೋಮೀಟರ್ ನಡೆದುಕೊಂಡು ಆಶೀರ್ವಾದ್ ಬಳಿ ಬರಬೇಕಾಗಿದ್ದು ಸಂತೆಕಟ್ಟೆಯ ಅಂಡರ್ ಪಾಸ್ ಬಳಿ ಕೂಡ ಸೂಕ್ತ ಬಸ್ ನಿಲ್ದಾಣವಾಗಲಿ, ಗುಂಡಿಯಿಂದ ಮೇಲೆ ಹತ್ತಿ ಕೆಮ್ಮಣ್ಣು ಕಡೆಗೆ ತೆರಳಲು ಯಾವುದೇ ಮೆಟ್ಟಿಲು ವ್ಯವಸ್ಥೆಯಾಗಲಿ ಯಾವುದು ಕೂಡ ಇಲ್ಲದೆ ಜನರು ಪರದಾಡುವ ಪರಿಸ್ಥಿತಿಯನ್ನು ತಂದೊಡ್ಡಲಾಗಿದೆ.

ಈ ಆವಾಂತರಕ್ಕೆ ಸಂಸದೆ ಶೋಭಾ ಕರಂದ್ಲಾಜೆ ನೇರ ಹೊಣೆಯಾಗಿದ್ದಾರೆ. ಇಷ್ಟೊಂದು ಕಾಮಗಾರಿಯನ್ನು ಬಾಕಿ ಇಟ್ಟುಕೊಂಡು ತರಾತುರಿಯಲ್ಲಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸುವ ಅವಶ್ಯಕತೆ ಇರಲಿಲ್ಲ ಆದರೆ ಬಿಜೆಪಿಗರಿಗೆ ತಾವು ರಸ್ತೆ ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಲು ಈ ಮೂಲಕ ಚುನಾವಣೆಯಲ್ಲಿ ಮತ ಪಡೆಯಲು ಹೊರಟಿರುವುದು ಇವರುಗಳ ದಾರಿದ್ರ್ಯವನ್ನು ತೋರಿಸುತ್ತದೆ. ಇವರ ಕರ್ಮಕಾಂಡಕ್ಕೆ ಸಂತೆಕಟ್ಟೆ ಕಲ್ಯಾಣಪುರ ನಗರವನ್ನು ಎರಡು ಭಾಗಗಳನ್ನು ಮಾಡಿ ವಿಂಗಡಿಸಿ ಎರಡು ಭಾಗದ ಜನರು ಆಚೆಯಿಂದ ಈಚೆಗೆ ಸಂಚರಿಸಲು ಯಾವುದೇ ವ್ಯವಸ್ಥೆ ಮಾಡದೆ ಇರುವುದು ನಾಚೀಕೆಗೇಡು.

ಹೆಣಗಳ ಮೇಲೆ ರಾಜಕೀಯ ಮಾಡಿಕೊಂಡು ಬಂದಿದ್ದ ಶೋಭಾ ಕರಂದ್ಲಾಜೆಯವರು ಜಿಲ್ಲೆಗೆ ಯಾವುದೇ ಅಭಿವೃದ್ಧೀ ಮಾಡಿಲ್ಲ ಎಂಬ ಕಾರಣಕ್ಕಾಗಿ ಅವರದ್ದೆ ಪಕ್ಷದ ಕಾರ್ಯಕರ್ತರು ಗೋ-ಬ್ಯಾಕ್ ಅಭಿಯಾನದ ಮೂಲಕ ಬೆಂಗಳೂರಿಗೆ ಓಡಿಸಿದ್ದಾರೆ. ಅವರು ಇಲ್ಲಿ ಮಾಡಿದ ಕರ್ಮಕಾಂಡವನ್ನು ಜಿಲ್ಲೆಯ ಜನತೆ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ನೋಡಿ ಮತ ಹಾಕಿ ಎನ್ನುವ ಬಿಜೆಪಿಗರು ಮೋದಿಯವರನ್ನು ಒಮ್ಮೆ ಈ ರಸ್ತೆಗೆ ಕರೆದುಕೊಂಡು ಬಂದು ತೋರಿಸಬೇಕಾದ ಅನೀವಾರ್ಯತೆ ಇದೆ. ಬಿಜೆಪಿ ಸಂಸದರ ಈ ಕರ್ಮ ಕಾಂಡಕ್ಕೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜನರು ಸೂಕ್ತ ಉತ್ತರ ನೀಡಬೇಕಾಗಿದೆ ಇಲ್ಲವಾದಲ್ಲಿ ಮುಂದೆ ಜಿಲ್ಲೆಯ ಜನ ನೆಮ್ಮದಿಯ ಬದುಕು ಸಾಗಿಸಲು ಕಷ್ಟ ಸಾಧ್ಯವಾಗಲಿದೆ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಅವರು ಪತ್ರಿಕಾ ಪ್ರಕಟಣೆಯ ಮೂಲಕ ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!