2014ರ ಬಳಿಕ ಜಾರಿ ನಿರ್ದೇಶನಾಲಯದ(ಇ.ಡಿ) ದಕ್ಷತೆ ಹೆಚ್ಚಿದೆ: ನರೇಂದ್ರ ಮೋದಿ
ಹೊಸದಿಲ್ಲಿ: ಜಾರಿ ನಿರ್ದೇಶನಾಲಯದ (ಇ.ಡಿ) ದಕ್ಷತೆಯು 2014ರ ಬಳಿಕ ಹೆಚ್ಚಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದರು. ಅಲ್ಲದೆ ಇದಕ್ಕೆ ಸಾಕ್ಷ್ಯವನ್ನೂ ಅವರು ಒದಗಿಸಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ 2014ರವರೆಗೆ 1800 ಕೇಸುಗಳನ್ನು ಇಡಿ ದಾಖಲಿಸಿಕೊಂಡಿತ್ತು. ಆದರೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಇ.ಡಿ 5000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿದೆ ಎಂದಿದ್ದಾರೆ.
ಏಷ್ಯಾನೆಟ್ ಸಂದರ್ಶನದಲ್ಲಿ ಮಾತನಾಡಿದ ಅವರು, ಜಾರಿ ನಿರ್ದೇಶನಾಲಯದ ದಕ್ಷತೆ ಹೆಚ್ಚಿರುವುದಕ್ಕೆ ಇದು ಸಾಕ್ಷಿ ಎಂದಿದ್ದಾರೆ.ಅಲ್ಲದೆ 2014 ರ ಮೊದಲು ಮತ್ತು ನಂತರ ನಡೆಸಿದ ಹುಡುಕು ಕಾರ್ಯಾಚರಣೆಗಳ ಸಂಖ್ಯೆಯು 84 ರಿಂದ 7,000 ಕ್ಕೆ ಏರಿದೆ ಎಂದು ಅವರು ಹೇಳಿದರು.
ಇ.ಡಿ ಬಳಸಿ ವಿರೋಧ ಪಕ್ಷದ ನಾಯಕರನ್ನು ಹಣಿಯಾಗುತ್ತಿದೆ ಎಂಬ ವಿಪಕ್ಷಗಳ ಟೀಕೆಗೆ ಉತ್ತರಿಸಿದ ನರೇಂದ್ರ ಮೋದಿ ಅವರು, ರಾಜಕೀಯದಲ್ಲಿರುವ ಜನರ ಮೇಲೆ ಕೇವಲ ಮೂರು ಶೇಕಡಾದಷ್ಟು ಮಾತ್ರ ಇ.ಡಿ ಭ್ರಷ್ಟಾಚಾರ ಪ್ರಕರಣ ದಾಖಲಿಸಿದೆ ಎಂದರು.
ತನಿಖಾ ಸಂಸ್ಥೆಗಳು ಸ್ವತಂತ್ರವಾಗಿ ಕೆಲಸ ಮಾಡಲು ಸರ್ಕಾರ ಬಿಡಬೇಕು ಮತ್ತು ಅವರ ರಾಜಕೀಯ ಹಿತಾಸಕ್ತಿಗಳಿಗಾಗಿ ಅವರ ಕೆಲಸಕ್ಕೆ ಅಡ್ಡಿಯಾಗ ಬಾರದು ಎಂದು ಪ್ರಧಾನಿ ಹೇಳಿದರು.ಲೋಕಸಭಾ ಚುನಾವಣೆಯ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, 2024ರ ಚುನಾವಣೆಯೂ ಅತ್ಯಂತ ನಿರ್ಣಾಯಕ ಎಂದರು. ಯಾಕೆಂದರೆ ಮೂರು ದಶಕಗಳ ಕಾಲ ಅಸ್ಥಿರ ಸರ್ಕಾರವನ್ನು ಕಂಡಿದ್ದ ದೇಶದ ಮತದಾರರು ಸ್ಥಿರ ಸರ್ಕಾರ ಏನು ಮಾಡಬಹುದು ಎಂದು ನೋಡಿದ್ದಾರೆ ಎಂದರು.ಇಂತಹ “ಅಸ್ಥಿರ ಸರ್ಕಾರಗಳು” ದೇಶಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡಿದೆ ಮತ್ತು ಜನರು ತಮ್ಮ ಅನುಭವದ ಆಧಾರದ ಮೇಲೆ ಮತ ಚಲಾಯಿಸುವುದರಿಂದ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗಳು ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು.