ಹುಬ್ಬಳ್ಳಿ: ವಿದ್ಯಾರ್ಥಿನಿ ಕೊಲೆ ಆಕಸ್ಮಿಕ; ಹುಡುಗಿ, ಆರೋಪಿ ಪರಸ್ಪರ ಪ್ರೀತಿಸುತ್ತಿದ್ದರು- ಗೃಹ ಸಚಿವ ಪರಮೇಶ್ವರ
ತುಮಕೂರು: ಹುಬ್ಬಳ್ಳಿಯ ಬಿವಿಬಿ ಕಾಲೇಜು ಕ್ಯಾಂಪಸ್ನಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯೊಬ್ಬರ ಕೊಲೆ ಪ್ರಕರಣ ಲವ್ ಜಿಹಾದ್ ಅಲ್ಲ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು ಶುಕ್ರವಾರ ಹೇಳಿದ್ದಾರೆ.
23 ವರ್ಷದ ನೇಹಾ ಹಿರೇಮಠ್ ತನ್ನನ್ನು ಪ್ರೀತಿಸುತ್ತಿದ್ದ ಯುವಕನನ್ನು ಮದುವೆಯಾಗಲು ನಿರಾಕರಿಸಿದ ನಂತರ, ಆರೋಪಿ ಫಯಾಜ್ ಚಾಕುವಿನಿಂದ ಅನೇಕ ಬಾರಿ ಇರಿದು ಆಕೆಯನ್ನು ಹತ್ಯೆ ಮಾಡಿದ್ದನು. “ಇಂತಹ ಘಟನೆಗಳು ಆಕಸ್ಮಿಕವಾಗಿ ಸಂಭವಿಸುತ್ತವೆ. ತಾನು ಪ್ರೀತಿಸುತ್ತಿದ್ದ ಹುಡುಗಿ ಬೇರೆಯವರನ್ನು ಮದುವೆಯಾಗುತ್ತಾಳೆ ಎಂಬ ಕೋಪದ ಭರದಲ್ಲಿ ಯುವಕ ಆಕೆಯನ್ನು ಕೊಂದಿದ್ದಾನೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಪರಮೇಶ್ವರ ಹೇಳಿದ್ದಾರೆ.
ನೇಹಾ ಮತ್ತು ಆರೋಪಿ ಫಯಾಜ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಿದ್ದಾರೆ. ನಂತರ, ನೇಹಾ ಅವನಿಂದ ದೂರವಾಗಲು ಪ್ರಯತ್ನಿಸಿದಳು ಮತ್ತು ಅವನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಕೋಪಗೊಂಡ ಆರೋಪಿ ನೇಹಾಳನ್ನು ಹತ್ಯೆ ಮಾಡಿದ್ದಾನೆ ಎಂದು ಗೃಹ ಸಚಿವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಘಟನೆಯ ಸಮಯದಲ್ಲಿ ನೇಹಾ ಅವರ ತಾಯಿ ಕೂಡ ಸ್ಥಳದಲ್ಲಿದ್ದರು ಮತ್ತು ಅವರ ಮೇಲೂ ಹಲ್ಲೆ ನಡೆಸಲಾಗಿದೆ. ಆದರೆ ಅವರನ್ನು ರಕ್ಷಿಸಲಾಯಿತು ಎಂದಿದ್ದಾರೆ.”ಇದು ಲವ್ ಜಿಹಾದ್ ಪ್ರಕರಣ ಎಂದು ಸಾಬೀತುಪಡಿಸಲು ಯಾವುದೇ ಪುರಾವೆಗಳು ಲಭ್ಯವಿಲ್ಲ” ಎಂದು ಗೃಹ ಸಚಿವರು ಸ್ಪಷ್ಟಪಡಿಸಿದ್ದಾರೆ.
ಬಿವಿಬಿ ಕಾಲೇಜಿನಲ್ಲಿ ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ ಅವರನ್ನು ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿ ಹಾಗೂ ಅದೇ ಕಾಲೇಜಿನ ಬಿಸಿಎ ವಿದ್ಯಾರ್ಥಿ ಫಯಾಜ್ ಕೊಂಡಿಕೊಪ್ಪ ಎಂಬುವರು ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಆತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನೇಹಾ ಅವರ ತಂದೆ ನಿರಂಜನ ಹಿರೇಮಠ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಆಗಿದ್ದಾರೆ.
ನೇಹಾ ಹತ್ಯೆ ಖಂಡಿಸಿ ಹಿಂದೂ ಪರ ಸಂಘಟನೆಗಳಿಂದ ಹುಬ್ಬಳ್ಳಿ ಬಂದ್
ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿಯ ಹತ್ಯೆಯನ್ನು ಖಂಡಿಸಿ ಹಿಂದೂ ಪರ ಸಂಘಟನೆಗಳು ಮತ್ತು ವಿದ್ಯಾರ್ಥಿ ಸಂಘಟನೆಗಳು ಶುಕ್ರವಾರ ಹುಬ್ಬಳ್ಳಿ ಬಂದ್ಗೆ ಕರೆ ನೀಡಿದ್ದವು. ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು,ನಗರದಾದ್ಯಂತ ಭದ್ರತೆಯನ್ನು ಹೆಚ್ಚಿಸಲಾಗಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಎಲ್ಲಾ ಕಾಲೇಜುಗಳಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬಂದ್ ಘೋಷಿಸಿದೆ. ಹಿಂದೂ ಜಾಗರಣ ವೇದಿಕೆ, ಶ್ರೀರಾಮ ಸೇನೆ ಮತ್ತು ವಿಶ್ವ ಹಿಂದೂ ಪರಿಷತ್, ನೇಹಾ ಹತ್ಯೆ ಖಂಡಿಸಿ ಬೆಳಗಾವಿ ನಗರದಲ್ಲಿ ಪ್ರತಿಭಟನೆಗೆ ನಡೆಸಿದವು.