ಬೈಂದೂರು: ಗೀತಾ ಶಿವರಾಜ್‌ ಕುಮಾರ್ ಯಡಿಯೂರಪ್ಪರ ಡಮ್ಮಿ ಅಭ್ಯರ್ಥಿ- ಈಶ್ವರಪ್ಪ ಆರೋಪ

ಬೈಂದೂರು, ಎ.18: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತಿರುವ ಗೀತಾ ಶಿವರಾಜ್ ಕುಮಾರ್ ಅವರು ಯಡಿಯೂರಪ್ಪ ನಿಲ್ಲಿಸಿದ ಹಾಕಿಸಿದ ಡಮ್ಮಿ ಅಭ್ಯರ್ಥಿ ಎಂದು ಬಿಜೆಪಿಯ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದಾರೆ.

ಗುರುವಾರ ಬೈಂದೂರಿನ ಉಪ್ಪುಂದದಲ್ಲಿರುವ ರಾಷ್ಟ್ರಭಕ್ತ ಬಳಗದ ನೂತನ ಕಾರ್ಯಾಲಯದಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ಅವರು ಮಾತನಾಡಿದರು.

ಯಡಿಯೂರಪ್ಪ ತನ್ನ ಮಗನ ಗೆಲುವಿಗಾಗಿ ಶಿವಮೊಗ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಈಶ್ವರಪ್ಪ, ಅದಕ್ಕಾಗಿಯೇ ಗೀತಾ ಶಿವರಾಜ್‌ಕುಮಾರ್ ಅವರನ್ನು ಕಾಂಗ್ರೆಸ್‌ನಿಂದ ಸ್ಪರ್ಧಿಸುವಂತೆ ಮಾಡಿ ದ್ದಾರೆ. ಇದರಿಂದಾಗಿ ಕಾಂಗ್ರೆಸ್‌ನ ಅಸಮಾಧಾನಿತ ನಾಯಕರು ಮತ್ತು ಮತದಾರರು ನನ್ನನ್ನು ಬೆಂಬಲಿಸುತ್ತಿದ್ದಾರೆ ಎಂದು ಬಹಿರಂಗ ಪಡಿಸಿದರು.

ರಾಜ್ಯದಲ್ಲಿ ಬಿಜೆಪಿ ರಾಜಕಾರಣ ಶುದ್ಧಿಯಾಗಬೇಕು. ಹಿಂದುತ್ವದ ಬಗ್ಗೆ ಪಕ್ಷಗಳಿಗೆ ಕಾಳಜಿ ಇರಬೇಕು. ಬಿಜೆಪಿಯ ಶೇ.60ರಿಂದ 70ರಷ್ಟು ಕಾರ್ಯಕರ್ತರು ನಮ್ಮೊಂದಿಗಿದ್ದಾರೆ. 40 ವರ್ಷದಿಂದ ಬಿಜೆಪಿ ಪಕ್ಷ ಸಂಘಟನೆ ಮಾಡಿದ್ದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದವರು ಹೇಳಿ

ಕೇಂದ್ರದವರು ಮತ್ತೆ ಮತ್ತೆ ಕರೆ ಮಾಡಿಸುತ್ತಿದ್ದಾರೆ. ನಿಲ್ಲೋದು, ಗೆಲ್ಲೋದು, ನರೇಂದ್ರ ಮೋದಿಯವರಿಗೆ ಕೈ ಎತ್ತುವುದು ಖಾತ್ರಿ ಎಂದು ಅವರಿಗೆ ತಿಳಿಸಿದ್ದೇನೆ ಎಂದ ಈಶ್ವರಪ್ಪ, ಬಾಜಪ ಸಾಮೂಹಿಕ ನೇತೃತ್ವದ ವ್ಯವಸ್ಥೆ ಮರೆತಿದೆ. ಬಿ.ವೈ. ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಲು ಅಯೋಗ್ಯ. ಅಣ್ಣ-ತಮ್ಮ ಇಬ್ಬರು ಹಾವೇರಿಯಲ್ಲಿ ಟಿಕೆಟ್ ಕೊಡಿಸುವುದಾಗಿ ನನ್ನ ಮಗನ ಬಳಿ ಆಣೆ ಮಾಡಿದ್ದರು ಎಂದು ಆರೋಪಿಸಿದರು.

ಚುನಾವಣೆಯಲ್ಲಿ ಸಾಧು ಸಂತರನ್ನು ಎಳೆದು ತರಬಾರದಿತ್ತು. ಇದು ಬಹಳ ನೋವಿನ ಸಂಗತಿ ಎಂದಿರುವ ಈಶ್ವರಪ್ಪ, ಇದನ್ನು ರಾಷ್ಟ್ರ ಭಕ್ತಬಳಗ ಖಂಡಿಸುತ್ತದೆ ಎಂದರು. ಲೋಕಸಭಾ ಕ್ಷೇತ್ರದಲ್ಲಿ ನನಗೆ ಪೂರ್ಣ ಜನಬೆಂಬಲ ಸಿಕ್ಕಿದೆ. ಅಲ್ಲದೇ ಕಾಂಗ್ರೆಸ್ ಹಾಗೂ ಬಿಜೆಪಿಯವರು ಹಿಂಬಾಗಿಲಿನಿಂದ ಬೆಂಬಲ ಕೊಡುವುದಾಗಿ ಹೇಳಿದ್ದಾರೆ ಎಂದರು.

ಈಶ್ವರಪ್ಪ ಯಾರು ಅಂತ ಗೊತ್ತಿಲ್ಲ ಎಂದಿರುವ ರಾಧಾಮೋಹನ್ ಅಗರ್ವಾಲ್ ನನ್ನ ಮನೆಗೆ ಬಂದಿದ್ದು ಅದು ಅವರಿಗೆ ಮರೆತಿರಬೇಕು ಎಂದರು. ನನ್ನ ಕೂಗು ಕೇಂದ್ರ ತಲುಪಿದ್ದು ನಿತ್ಯವೂ ಫೋನ್ ಕರೆ ಬರುತ್ತಿದೆ. ಅಮಿತ್ ಶಾ ಅವರಿಗೆ ಮಾತು ತಲುಪಿದೆ. ವಿಚಾರ ತಿಳಿದು ಶಾಗೆ ಉತ್ತರ ಕೊಡೋದಕ್ಕೆ ಆಗಿಲ್ಲ ಎಂದಿರುವ ಅವರು, ವಿಜಯೇಂದ್ರ ಎಳಸು ಅವನಿಗೆ ಅನುಭವ ಇಲ್ಲ. ನನ್ನ ಸಾಧನೆ ಬಗ್ಗೆ ನಿನ್ನ ಅಪ್ಪನಿಗೆ ಕೇಳು. ರಾಜ್ಯದಲ್ಲಿ ನಾನು ಕೆಲಸ ಮಾಡಿಲ್ಲ ಅನ್ನಲಿ, ಆಗ ನಿಮಗೆ ಉತ್ತರ ಕೊಡ್ತೇನೆ ಎಂದು ಯಡಿಯೂಪ್ಪ ಮಕ್ಕಳ ವಿರುದ್ಧ ವಾಗ್ದಾಳಿ ನಡೆಸಿದರು.

ಅನೇಕ ಮಂದಿ ಹಿರಿಯರ ತಪಸ್ಸಿಂದ ಕಟ್ಟಿದ ಪಕ್ಷ ಇಂದು ಕರ್ನಾಟಕದಲ್ಲಿ ಅಧೋಗತಿಗೆ ಹೋಗುತ್ತಿರುವುದು ಬೇಸರ ತರಿಸಿದೆ. ಬಿಜೆಪಿ ಪ್ರೈವೆಟ್ ಲಿಮಿಟೆಡ್ ಪಾರ್ಟ್ನಶಿಪ್ ಕಂಪನಿ ಅಲ್ಲ ಎನ್ನುವುದನ್ನು ಅಪ್ಪಮಕ್ಕಳು ಅರ್ಥ ಮಾಡಿಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಗೂಳಿಹಟ್ಟಿ ಶೇಖರ, ಮುಖಂಡ ನಾರಾಯಣ ಗುಜ್ಜಾಡಿ ಉಪಸ್ಥಿತರಿದ್ದರು.

ನನಗೆ ಸಿಂಹ, ಹುಲಿಯಂಥ ಚಿಹ್ನೆ ಬೇಕು

ಶಿವಮೊಗ್ಗದಲ್ಲಿ ನನ್ನ ಸ್ಪರ್ಧೆ ಖಚಿತ. ಇನ್ನು ಎರಡು-ಮೂರು ದಿನಗಳಲ್ಲಿ ನನ್ನ ಚಿಹ್ನೆ ಅಂತಿಮಗೊಳ್ಳಲಿದೆ. ಚಿಹ್ನೆ ವಿಚಾರದಲ್ಲಿ ನನಗೆ ತಕರಾರು ಇದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯುತ್ತೇನೆ ಎಂದು ಈಶ್ವರಪ್ಪ ನುಡಿದರು.

ಚುನಾವಣೆಯಲ್ಲಿ ನನಗೆ ಸಿಂಹ, ಹುಲಿ ತರಹದ ಚಿಹ್ನೆ ಬೇಕು. ಹುಮ್ಮಸ್ಸು ಬರೋ ಚಿಹ್ನೆ ಬೇಕು ಎಂದು ಬೇಡಿಕೆ ಇಟ್ಟು ಪತ್ರ ಬರೆಯುತ್ತೇನೆ. ನನಗೆ ಈಗ ಕೊಟ್ಟಿರೋ ಚಿಹ್ನೆಗಳ ಪಟ್ಟಿಯಲ್ಲಿ ಯಾವುದೂ ಒಳ್ಳೆಯ ಚಿಹ್ನೆಗಳಿಲ್ಲ ಎಂದು ಈಶ್ವರಪ್ಪ ತಿಳಿಸಿದರು.

ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷನಾಗಲು ಅಯೋಗ್ಯ. ಆತನ ಯೋಗ್ಯತೆ ಒಂದು ತಿಂಗಳಲ್ಲಿ ಗೊತ್ತಾಗಿದೆ. ಮರಿ ರಾಜಹುಲಿ ನಾಯಿಕುನ್ನಿ ಗಿಂತ ಕೆಳಗಿನ ಯೋಗ್ಯತೆ ತೋರಿಸಿದ್ರು ಎಂದು ಈಶ್ವರಪ್ಪ, ತನ್ನ ಒಂದು ಕಾಲದ ಗೆಳೆಯ ಯಡಿಯೂರಪ್ಪ ಕುಟುಂಬದ ಬಗ್ಗೆ ಕಿಡಿ ಕಾರಿದರು.

ಶಿವಮೊಗ್ಗದಲ್ಲಿ ನನಗೆ ಆರ್‌ಎಸ್‌ಎಸ್ ಹಾಗೂ ಸಂಘಪರಿವಾರ ಬೆಂಬಲ ನೀಡುತ್ತಿದೆ ಎಂದೂ ಅವರು ಬಹಿರಂಗ ಪಡಿಸಿದರು.

Leave a Reply

Your email address will not be published. Required fields are marked *

error: Content is protected !!