ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸೋಲಿಸಲು ‘ಜನ ಸಮಾವೇಶ’ದ ಪ್ರತಿಜ್ಞೆ

ಮಂಗಳೂರು, ಎ. 14: ಕಾರ್ಪೊರೇಟ್ ಹಿತಾಸಕ್ತಿಗಳ ಪರವಾದ ಬಿಜೆಪಿ ಅಭ್ಯರ್ಥಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಲಿಸುವ ಪ್ರತಿಜ್ಞೆಯೊಂದಿಗೆ ಆಪ್, ಸಿಪಿಐ, ಸಿಪಿಎಂ, ಜನತಾದಳವನ್ನು ಒಳಗೊಂಡ ಜಾತ್ಯತೀತ ಪಕ್ಷಗಳು ಹಾಗೂ ಜಿಲ್ಲೆಯ ವಿವಿಧ ಸಮಾನ ಮನಸ್ಕ ಸಂಘಟನೆಗಳ ಪ್ರತಿನಿಧಿಗಳು ವೇದಿಕೆಯಲ್ಲಿ ಐಕ್ಯ ಪ್ರದರ್ಶಿಸಿದ್ದಾರೆ.

ಸೋಮವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ ಜನ ಸಮಾವೇಶದಲ್ಲಿ ಜಿಲ್ಲೆಯ ನೈಜ ಅಭಿವೃದ್ಧಿ ಹಾಗೂ ಸೌಹಾರ್ದಕ್ಕಾಗಿ 25ರಷ್ಟು ವಿವಿಧ ಪಕ್ಷ ಹಾಗೂ ಸಂಘಟನೆಗಳ ಪ್ರತಿನಿಧಿಗಳು ಪರಸ್ಪರ ಕೈಜೋಡಿಸಿಕೊಂಡು ಒಗ್ಗಟ್ಟು ಪ್ರದರ್ಶಿಸಿದರು. ಈ ಸಂದರ್ಭ ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟದ ಜತೆ ಗುರುತಿಸಿಕೊಂಡಿರುವ ಜನತಾ ದಳದ ಜಿಲ್ಲಾ ಘಟಕದ ಪ್ರಮುಖರು ನಝೀರ್ ಉಳ್ಳಾಲ್ ನೇತೃತ್ವದಲ್ಲಿ ಜನ ಸಮಾವೇಶದಲ್ಲಿ ದ.ಕ. ಜಿಲ್ಲಾ ಜನತಾ ಪರಿವಾರದ ಹೆಸರಿನಲ್ಲಿ ಬೆಂಬಲ ಸೂಚಿಸಿದರು. ದ.ಕ. ಜಿಲ್ಲೆಯಲ್ಲಿ 33 ವರ್ಷಗಳ ಸತತ ಗೆಲುವಿನ ಹೊರತಾಗಿಯೂ ಜಿಲ್ಲೆಯನ್ನು ಅಭಿವೃದ್ಧಿ ಹೀನ ಸ್ಥಿತಿಗೆ ತಳ್ಳಿದ, ಜಿಲ್ಲೆಯನ್ನು ಉದ್ವಿಗ್ನ ನಗರವೆಂಬ ಕುಖ್ಯಾತಿಗೆ ಕಾರಣವಾದ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿ ಜನಪರ ‘ಇಂಡಿಯಾ’ ಒಕ್ಕೂಟದ ಅಭ್ಯರ್ಥಿಯನ್ನು ಚುನಾಯಿಸುವಂತೆ ಜನರಿಗೆ ಮನವಿ ಮಾಡುವ ಕರಪತ್ರವನ್ನು ಜನ ಸಮಾವೇಶದಲ್ಲಿ ಬಿಡುಗಡೆ ಗೊಳಿಸಲಾಯಿತು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದು ದೇಶದ ಭವಿಷ್ಯ, ಸಂವಿಧಾನದ ಉಳಿವು ಮತ್ತು ಜಿಲ್ಲೆಯ ಅಭಿವೃದ್ದಿ ಮಟ್ಟಿಗೆ ಅನಿವಾರ್ಯ. ಪ್ಯಾಶಿಸ್ಟ್ ಪ್ರಭುತ್ವ ಮತ್ತೆ ಗೆಲುವು ಸಾಧಿಸಿದರೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಪೂರ್ಣ ಪ್ರಮಣದ ಸರ್ವಾಧಿಕಾರವಾಗಿ ಅಪ್ಪಳಿಸಲಿದೆ. ಅಪಾರ ಸಂಪನ್ಮೂಲಗಳ ದ.ಕ. ಜಿಲ್ಲೆ ಬರಡಾಗಲಿದೆ. ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿರುವ ಇಂಡಿಯಾ ಮಿತ್ರ ಕೂಟದ ಕಾಂಗ್ರೆಸ್ಸೇತರ ಎಡಪಕ್ಷಗಳು, ಆಮ್ ಆದ್ಮಿ ಹಾಗೂ ಜಿಲ್ಲೆಯ ಸಮಾನ ಮನಸ್ಕ ಜನಪರ ಸಂಘಟನೆಗಳಾದ ವಿದ್ಯಾರ್ಥಿ, ಯುವಜನ, ಮಹಿಳಾ, ರೈತ, ಕಾರ್ಮಿಕ, ದಲಿತ, ಆದಿವಾಸಿ ಸಂಘಟನೆಗಳು ಹಾಗೂ ಅಲ್ಪಸಂಖ್ಯಾತ ಸಮುದಾಯದ ಲಿಬರಲ್ ಸಂಘಟನೆಗಳು ಒಟ್ಟಾಗಿ ಬಿಜೆಪಿ ಕೂಟವನ್ನು ಚುನಾವಣೆಯಲ್ಲಿ ಮತದಾರರು ಸೋಲಿಸಬೇಕು ಎಂಬ ಮನವಿಯನ್ನು ಇಂದು ಬಿಡುಗಡೆಗೊಳಿಸಲಾದ ಮನವಿ ಪತ್ರದಲ್ಲಿ ಮಾಡಲಾಗಿದ್ದು, ಅದನ್ನು ಪ್ರತಿ ಮನೆಗಳಿಗೂ ತಲುಪಿಸುವಂತೆ ಸಮಾವೇಶದಲ್ಲಿ ಸೇರಿದ್ದ ವಿವಿಧ ಪಕ್ಷ, ಸಂಘಟನೆಗಳ ನಾಯಕರಿಗೆ ಕರೆ ನೀಡಲಾಯಿತು.

ಬಿಜೆಪಿ ಗೆದ್ದರೆ ಮುಂದೆ ಗ್ಯಾರಂಟಿಗಳೇ ಬಂದ್

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಕೊರೋನ ಸಂಕಷ್ಟದ ನಡುವೆ ನಿರುದ್ಯೋಗ, ಬೆಲೆ ಏರಿಕೆಯಿಂದ ತತ್ತರಿಸಿರುವ ಜನರು ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಿಂದಾಗಿ ಉಸಿರಾಡುವಂತಾಗಿದೆ. ಆದರೆ ಗ್ಯಾರಂಟಿಗಳನ್ನು ವಿರೋಧಿಸುವ ಬಿಜೆಪಿ ಅಧಿಕಾರಕ್ಕೆ ಬಂದರೆ, ರಾಜ್ಯದ ಶಾಸಕರನ್ನು ಅಪರೇಶನ್ ಕಮಲದ ಮೂಲಕ ಖರೀದಿಸಿ ಸರಕಾರವನ್ನು ಅಸ್ತಿರಗೊಳಿಸಿ ಗ್ಯಾರಂಟಿಗಳನ್ನೇ ಬಂದ್ ಮಾಡಲಿದ್ದಾರೆ ಎಂದು ಹೇಳಿದರು.

ಗ್ಯಾರಂಟಿಯನ್ನು ವಿರೋಧಿಸುವ ಬಿಜೆಪಿಯ ಶಾಸಕರನ್ನೇ ಅಧಿಕ ಸಂಖ್ಯೆಯಲ್ಲಿ ನೀಡಿರುವ ದಕ್ಷಿಣ ಕನ್ನಡ ಜಿಲ್ಲೆಯೇ ಗ್ಯಾರಂಟಿಗಳ ಫಲಾನುಭವಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದೆ. ಹಿಂದೂ ಧರ್ಮ ಅಪಾಯದಲ್ಲಿದೆ ಎಂಬ ಅಮಲನ್ನು ಮತದಾರರಲ್ಲಿ ತುಂಬಿಸಿ ಜನರ ನೈಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಬಿಜೆಪಿಯನ್ನು ಸೋಲಿಸಬೇಕು ಎಂದವರು ಹೇಳಿದರು.

10 ವರ್ಷಗಳ ಹಿಂದೆ ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ. ಜನರಿಗೆ ಹಂಚುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ. ಡಾಲರ್ ಎದುರು ರೂಪಾಯಿ ಮೌಲ್ಯ ಹೆಚ್ಚಿಸಿ ವಿಶ್ವ ಗುರು ಮಾಡುತ್ತೇವೆ ಎಂದು ಅಧಿಕಾರಕ್ಕೆ ಬಂದವರು ಈಗ ಡಾಲರ್ನೆದರು ರೂಪಾಯಿ ಮೌಲ್ಯ ಮತ್ತಷ್ಟು ಕುಸಿದು ವಿಶ್ವದೆದುರು ಬೆತ್ತಲಾಗಿದ್ದಾರೆ. ತಾನು ನೀಡಿರುವ ಭರವಸೆ ಈಡೇರದ ಬಗ್ಗೆ ಮಾತನಾಡದೆ ಇದೀಗ ಮತ್ತೆ ತಮ್ಮ ಕರಪತ್ರದಲ್ಲಿ ರಾಮಮಂದಿರ ಕಟ್ಟಿದ್ದೇವೆ, ಮುಸ್ಲಿಮ್ ಮಹಿಳೆಯರಿಗೆ ನ್ಯಾಯ ಕೊಟ್ಟಿದ್ದೇವೆ ಎಂಬ ಮಾತುಗಳನ್ನು ಜನ ನಂಬುವ ಸ್ಥಿತಿಯಲ್ಲಿ ಇಲ್ಲ. ಭ್ರಷ್ಟಾಚಾರ ಮುಕ್ತಗೊಳಿಸುವುದಾಗಿ ಹೇಳಿ ದೇಶವನ್ನು ವಿಶ್ವಗುರು ಮಾಡುವುದಾಗಿ ಹೇಳಿದವರು ಇಂದು ಭ್ರಷ್ಟರನ್ನೆಲ್ಲಾ ಆಸೆ, ಆಮಿಷ ಒತ್ತಡಕ್ಕೆ ಸಿಲುಕಿ ತಮ್ಮ ಪಕ್ಷದ ವಾಶಿಂಗ್ ಮಿಶನ್ಗೆ ಇಳಿಸಿ ಪರಿಶುದ್ಧ ಮಾಡುವ ಪ್ರಯತ್ನ ನಡೆಸುತ್ತಿದ್ದಾರೆ. ಚುನಾವಣೆಯಲ್ಲಿ ಅಭಿವೃದ್ಧಿ, ಬದುಕಿನ ಸಮಸ್ಯೆಗಳಬದಲಿಗೆ ಧರ್ಮಗಳ ಧ್ರುವೀಕರಣ, ತನ್ನ ರಾಜಕೀಯ ಟೂಲ್ ಕಿಟ್ ಗಾಇ ಹಿಂದುತ್ವವನ್ನೇ ಮುನ್ನಲೆಗೆ ತರಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆಲ್ಲಾ ಜನಸಾಮಾನ್ಯರು ತಕ್ಕ ಉತ್ತರ ನೀಡಬೇಕು ಎಂದು ಮುನೀರ್ ಕಾಟಿಪಳ್ಳ ಹೇಳಿದರು.

ಸಿಪಿಐ ಮುಖಂಡ ಬಿ. ಶೇಖರ್ ಮಾತನಾಡಿ, ಕೇಂದ್ರದಲ್ಲಿ 10 ವರ್ಷಗಳ ತನ್ನ ದುರಾಡಳಿತದಲ್ಲಿ ಬಿಜೆಪಿಯು ದೇಶದ ಬೆನ್ನೆಲುಬಾದ ರೈತರನ್ನು ಕಡೆಗಣಿಸಿದೆ. ಇದಕ್ಕೆ ಪ್ರತಿಯಾಗಿ ಜಾತ್ಯತೀತ ಪಕ್ಷಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳಿಂದ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳನ್ನು ಬೆಂಬಲಿಸುವ ಕಾರ್ಯ ಸಕ್ರಿಯಗೊಳ್ಳಬೇಕು ಎಂದರು.

ಆಮ್ ಆದ್ಮಿ ಪಕ್ಷದ ಡಾ.ವಿಶು ಕುಮಾರ್ ಮಾತನಾಡಿ, ಸಂವಿಧಾನ ಬದಲಾಯಿಸಲು ಹೊರಟಿರುವ ಆರೆಸ್ಸೆಸ್ ಹಾಗೂ ಬಿಜೆಪಿಯ ವಿರುದ್ಧ ಇಂಡಿಯಾ ಒಕ್ಕೂಟ ರಚನೆಯಾಗಿದ್ದು, ದ.ಕ. ಜಿಲ್ಲೆಯಲ್ಲಿ ಕೋಮು ಸೌಹಾರ್ದ ಮರು ಸ್ಥಾಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಅವರನ್ನು ಬೆಂಬಲಿಸಬೇಕು ಎಂದು ಕರೆ ನೀಡಿದರು.

ಸಮಾವೇಶದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಮತ್ತು ಮುನೀರ್ ಕಾಟಿಪಳ್ಳ ಅವರ ‘ಕರಾವಳಿ ಪತನ ಚರಿತ್ರೆ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ವೇದಿಕೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ದೇವದಾಸ್, ಯಾದವ ಶೆಟ್ಟಿ, ಜೆ. ಬಾಲಕೃಷ್ಮ ಶೆಟ್ಟಿ, ಸೀತಾರಾಮ ಬೇರಿಂಜ, ಅಶ್ರಫ್ ಕೆ., ಆಲ್ವಿನ್ ಡಿಸೋಜ, ಅಶ್ರಫ್ ಕಲ್ಲೇಗ, ಬಿಕೆ ಇಮ್ತಿಯಾಝ್, ಜಯಂತಿ ಬಿ. ಶೆಟ್ಟಿ, ಮಂಜುಳಾ ನಾಯಕ್, ದಿನೇಶ್ ಹೆಗ್ಡೆ ಉಳೇಪಾಡಿ, ಯಶವಂತ ಮರೋಳಿ, ಕರಿಯ ಕೆ., ಕೇಶವತಿ ಬಂಟ್ವಾಳ ಮೊದಲಾದವರು ಉಪಸ್ಥಿತರಿದ್ದರು.

ಸಮಾವೇಶದಲ್ಲಿ ಎಐಟಿಯುಸಿ, ಸಿಐಟಿಯುಸಿ, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ರಾಜ್ಯ ರೈತ ಸಂಘ, ಎಸ್ಎಫ್ಐ, ಡಿವೈಎಫ್ ಐ, ಎಐವೈಎಫ್, ಜೆಎಂಎಸ್, ಎನ್ಎಫ್ಐಡಬ್ಲು, ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಸಮುದಾಯ ಮಂಗಳೂರು, ಇಷ್ಟಾ ಮಂಗಳೂರು, ಅಖಿಲ ಭಾರತ ವಕೀಲರ ಸಂಘ, ಮಾನವತಾ ವೇದಿಕೆ, ಪ್ರಗತಿಪರ ಚಿಂತಕರ ವೇದಿಕೆ, ಸಂತ ಮದರ್ ತೆರೇಸಾ ವಿಚಾರ ವೇದಿಕೆ, ಸಾಮರಸ್ಯ ಮಂಗಳೂರು, ದ.ಕ. ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, ದ.ಕ. ಜಿಲ್ಲಾ ವಿಚಾರವಾದಿಗಳ ಸಂಘ, ಪಿಎಸಿಎಲ್ ಏಜೆಂಟರ ಹೋರಾಟ ಸಮಿತಿ, ಸೌಹಾರ್ದ ಮಹಿಳಾ ವೇದಿಕೆ, ಗುರು ಬೆಳದಿಂಗಳು ಫೌಂಡೇಶನ್, ಮುಸ್ಲಿಮ್ ಐಕ್ಯತಾ ವೇದಿಕೆ, ಸುನ್ನಿ ಯುವಜನ ಸಂಘ, ಕೆಥೊಲಿಕ್ ಸಭಾ ಮಂಗಳೂರು ಪ್ರದೇಶ್, ದ.ಕ. ಜಿಲ್ಲಾ ಮುಸ್ಲಿಮ್ ಯುವಜನ ಪರಿಷತ್, ಪ್ರಗತಿಪರ ಅಧ್ಯಾಪಕರ ವೇದಿಕೆ, ನಾರಾಯಣಗುರು ವಿಚಾರ ಕಮ್ಮಟ, ಕರಾವಳಿ ವೃತ್ತಿನಿರತ ಅಲೆಮಾರಿ ಹಕ್ಕುಗಳ ಸಮಿತಿಯ ಪ್ರತಿನಿಧಿಗಳು ಭಾಗವಹಿಸಿದ್ದರು.

ಮಹಾತ್ಮಾಗಾಂಧಿಯ ಕನಸನ್ನು ನನಸು ಮಾಡುವ ಉದ್ದೇಶದಿಂದ ಜನತಾಪಕ್ಷ ರಚನೆಯಾಗಿಯಾಗಿತ್ತು. ಜಾತ್ಯತೀತ ಮನಸ್ಸುಗಳು ರಾಜ್ಯದಲ್ಲಿ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದ್ದಲ್ಲದೆ, ಅವರನ್ನು ಪ್ರಧಾನಿ ಆಗಿಸುವ ಅವಕಾಶವೂ ಒದಗುವಂತಾಗಿತ್ತು. ಬಿಜೆಪಿ ಮತ್ತು ಆರೆಸ್ಸೆಸ್ ಸಿದ್ಧಾಂತ ದೇಶಕ್ಕೆ ಕಂಟ ಎನ್ನುತ್ತಿದ್ದ ದೇವೇಗೌಡರು ತಮ್ಮ ಪುತ್ರನ ಅಧಿಕಾರದ ಹಸಿವಿಗಾಗಿ, ನಾಡಿನ ಲಕ್ಷಾಂತರ ಜನತಾದಳ ಕಾರ್ಯಕರ ಮನೋಭಾವಕ್ಕೆ ವಿರುದ್ಧವಾಗಿ ಕುಟುಂಬದ ಹಿತಾಸಕ್ತಿಗೆ ಬಿಜೆಪಿ ಜತೆ ಕೈಜೋಡಿಸಿದ್ದಾರೆ. ಆದರೆ ಇದರ ಜತೆ ಮುಂದುವರಿಯಲು ಸಾಧ್ಯವಾಗದ ಜಿಲ್ಲೆಯ ಜಾತ್ಯತೀತ ಮನಸ್ಸುಗಳು ಜನತಾ ಪರಿವಾರದ ಹೆಸರಿನಲ್ಲಿ ಒಗ್ಗೂಡಿ ಇಂಡಿಯಾ ಒಕ್ಕೂಟವನ್ನು ಬೆಂಬಿಸಲು ನಿರ್ಧರಿಸಿವೆ ಎಂದು ಜನತಾ ಪರಿವಾರದ ನಝೀರ್ ಉಳ್ಳಾಲ್ ಅಭಿಪ್ರಾಯಿಸಿದರು.

10 ವರ್ಷಗಳಿಂದ ಬಿಜೆಪಿಯ ಕಾರ್ಯಕರ್ತನಾಗಿರುವುದಾಗಿ ಹೇಳಿಕೊಂಡಿರುವ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ, ಕಂಬಳಗಳನ್ನು ನಡೆಸಿರುವುದು ಬಿಟ್ಟರೆ, ಇಲ್ಲಿನ ಯುವಜನತೆಯ ನಿರುದ್ಯೋಗ ಸಮಸ್ಯೆ ಬಗ್ಗೆ ಮಾತನಾಡಿಲ್ಲ. ಎಂಆರ್ಪಿಎಲ್ನಲ್ಲಿ ಸ್ಥಳೀಯರಿಗೆ ಉದ್ಯೋಗ ನೇಮಕಾತಿಗಾಗಿ ನಡೆಯುತ್ತಿದ್ದ ಹೋರಾಟವಾಗಿರಲಿ, ಜೆಬಿಎಫ್ ಕಂಪೆನಿ ಬಂದ್ ಆಗಿ ಕೇಂದ್ರ ಸರಕಾರದ ಸ್ವಾಮ್ಯದ ಗೇಲ್ ಸಂಸ್ಥೆ ಪಡೆದ ಬಳಿಕ ಅಲ್ಲಿ ಭೂಮಿ ಕಳೆದುಕೊಂಡು ಕೆಲಸ ಪಡೆದಿದ್ದ ನೂರಾರು ಸ್ಥಳೀಯರು ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಾಗ ಟಿಕೆಟ್ಗಾಗಿ ಓಡಾಡುತ್ತಿದ್ದ ಬೃಜೇಶ್ ಅವರು ಇವರದ್ದೇ ಪಕ್ಷದ ಸಂಸದರು, ಶಾಸಕರಿದ್ದರೂ ಆ ಸ್ಥಳೀಯರ ಬಗ್ಗೆ ಧ್ವನಿ ಎತ್ತಿಲ್ಲ ಯಾಕೆ? ಪತಂಜಲಿಯ ಸಂಸ್ಥೆಗಳಲ್ಲಿಯೂ ಸೆಕ್ಯೂರಿಟಿ ಗಾರ್ಡ್ ಗಳಾಗಿ ಹೊರ ರಾಜ್ಯಗಳಾಗಿ ದುಡಿಯುತ್ತಿರುವಾಗ ಇಲ್ಲಿನ ನಿರುದ್ಯೋಗಿ ಯುವಕರಿಗೆ ಕನಿಷ್ಠ ಆ ಹುದ್ದೆಗಳನ್ನಾದರೂ ಕೊಡಿಸಲು 10 ವರ್ಷಗಳಿಂದ ಪಕ್ಷದ ಕಾರ್ಯಕರ್ತರಾಗಿದ್ದ ಬ್ರಿಜೇಶ್ ಹೋರಾಟ ಮಾಡಿದ್ದಾರೆಯೇ ಎಂದು ಪ್ರಶ್ನಿಸಿರುವ ಮುನೀರ್ ಕಾಟಿಪಳ್ಳ, ಜನರು ಈ ಬಗ್ಗೆ ಅಲೋಚಿಸುವ, ಪ್ರಶ್ನಿಸುವ ಸಮಯ ಬಂದಿದೆ ಎಂದರು.

Leave a Reply

Your email address will not be published. Required fields are marked *

error: Content is protected !!