ಶಾಸಕ ಮುನಿರತ್ನ ಸೇರಿದಂತೆ 7 ಮಂದಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು!

ಬೆಂಗಳೂರು: ಗುತ್ತಿಗೆದಾರನಿಗೆ ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಪ್ರಕರಣದಲ್ಲಿ ಜೈಲು ಸೇರಿರುವ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎರಡು ಕೇಸ್ ದಾಖಲಾಗಿರುವ ಮುನಿರತ್ನ ಆತನ ಗನ್ ಮ್ಯಾನ್ ವಿಜಯ್ ಕುಮಾರ್, ಸುಧಾಕರ್, ಕಿರಣ್ ಕುಮಾರ್, ಲೋಹಿತ್ ಗೌಡ, ಮಂಜುನಾಥ ಹಾಗೂ ಲೋಕಿ ಸೇರಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಕೃತ್ಯ ನಡೆದ ರಾಮನಗರ ಜಿಲ್ಲಾ ವ್ಯಾಪ್ತಿಯ ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆ ಬುಧವಾರ ತಡರಾತ್ರಿ ಅತ್ಯಾಚಾರದ ದೂರು ದಾಖಲಿಸಿದ್ದಾರೆ. ಖಾಸಗಿ ರೆಸಾರ್ಟ್ ನಲ್ಲಿ ಅತ್ಯಾಚಾರ ನಡೆದಿರುವುದಾಗಿ ಸಂತ್ರಸ್ತೆ ಡಿವೈಎಸ್ ಪಿ ದಿನಕರ ಶೆಟ್ಟಿ ಸಮ್ಮುಖದಲ್ಲಿ ಸಂತ್ರಸ್ತೆ ಹೇಳಿಕೆ ನೀಡಿದ್ದಾರೆ.

ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿರುವ, ಬಿಜೆಪಿಯಲ್ಲೂ ಸಕ್ರಿಯವಾಗಿರುವ ತನ್ನ ಮೇಲೆ 2020ರಿಂದ 2022ರವರೆಗೆ ಅತ್ಯಾಚಾರ ನಡೆಸಿ ಹನಿಟ್ರ್ಯಾಪ್ ಗೆ ಬಳಸಿಕೊಂಡಿರುವ ಕುರಿತು ದೂರು ನೀಡಿದ್ದಾರೆ. ದೂರು ಪರಿಶೀಲಿಸಿದ ನಂತರ ಠಾಣೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇಂದು ಪೊಲೀಸರು ಘಟನೆ ನಡೆದ ಸ್ಥಳಕ್ಕೆ ತೆರಳಿ ಮಹಜರು ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ದೂರಿನಲ್ಲಿ ಏನಿದೆ? ಕೋವಿಡ್ ಸಂದರ್ಭದಲ್ಲಿ ಇಬ್ಬರ ನಡುವೆ ಆತ್ಮೀಯತೆ ಬೆಳೆದಿತ್ತು. ಆಗ್ಗಾಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಿದ್ದರು. ನಗ್ನವಾಗಿ ಇರುವಂತೆ ಕರೆ ಮಾಡಿ ಒತ್ತಾಯಿಸಿದಾಗ ಅದನ್ನು ನಿರಾಕರಿಸಿದ್ದೆ. ಒಮ್ಮೆ ಸ್ಥಳವೊಂದಕ್ಕೆ ಬರಲು ಹೇಳಿದ್ದರು. ನಾನು ಅಲ್ಲಿಗೆ ಹೋದಾಗ ತಬ್ಬಿಕೊಳ್ಳಲು ಮುಂದಾಗಿದ್ದರು.ಅದಕ್ಕೆ ಆಕ್ಷೇಪಿಸಿದಾಗ ರಾಜಕೀಯಕ್ಕೆ ಬರಬೇಕಾದರೆ ಇವೆಲ್ಲಾ ಕಾಮನ್ ಎಂದು ಹೇಳಿದ್ದರು. ಬಳಿಕ ಅತ್ಯಾಚಾರವೆಸಗಿದ್ದು, ಈ ವಿಷಯವನ್ನು ಯಾರಿಗಾದರೂ ಹೇಳಿದರೆ ಸಿಸಿಟಿವಿ ಕ್ಯಾಮರಾದಲ್ಲಿ ರೆಕಾರ್ಡ್ ಆಗಿರುವ ವಿಡಿಯೋವನ್ನು ಎಡಿಟ್ ಮಾಡಿ ಹಂಚುತ್ತೇನೆ ಎಂದು ಹೆದರಿಸಿದ್ದರು. ವಿಡಿಯೋ ಇಟ್ಟುಕೊಂಡು ಹಲವು ಬಾರಿ ಮುನಿರತ್ನ ಅತ್ಯಾಚಾರವೆಸಗಿರುವುದಾಗಿ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.

ಇಂದು ಜಾಮೀನು ಅರ್ಜಿ ಭವಿಷ್ಯ: ಈ ಮಧ್ಯೆ ಗುತ್ತಿಗೆದಾರರೊಬ್ಬರಿಗೆ ಜೀವ ಬೆದರಿಕೆ ಹಾಕಿ, ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಎನ್ ಮುನಿರತ್ನ ಅವರ ಜಾಮೀನು ಅರ್ಜಿಯ ಆದೇಶವನ್ನು ಶಾಸಕರು/ಸಂಸದರ ವಿಶೇಷ ನ್ಯಾಯಾಲಯ ಗುರುವಾರದವರೆಗೆ ಕಾಯ್ದಿರಿಸಿದೆ. ಜಾಮೀನು ಕೋರಿ ಮುನಿರತ್ನ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಮೂರ್ತಿ ಸಂತೋಷ್ ಗಜಾನನ ಭಟ್ ಅವರು, ಆದೇಶವನ್ನು ಇಂದಿಗೆ ಕಾಯ್ದಿರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!