ಬರ ಪರಿಹಾರ ವಿಚಾರ: ಕೇಂದ್ರದ ವಿರುದ್ಧ ಚುನಾವಣಾ ಆಯೋಗದ ಕದ ತಟ್ಟಿದ ಕಾಂಗ್ರೆಸ್
ಬೆಂಗಳೂರು: ಬರ ಪರಿಹಾರ ಬಿಡುಗಡೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಿದೆ ಎಂದು ಕೇಂದ್ರ ಸಚಿವರಾದ ಅಮಿತ್ ಶಾ ಹಾಗೂ ನಿರ್ಮಲಾ ಸೀತಾರಾಮನ್ ಹೇಳಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್, ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಮಂಗಳವಾರ ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಚುನಾವಣಾ ಆಯೋಗದ ಕಚೇರಿಗೆ ಮಾಜಿ ಸಂಸದ ಉಗ್ರಪ್ಪ ನೇತೃತ್ವದ ನಿಯೋಗ ದೂರು ನೀಡಿದ್ದು, ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಎಂದು ಕಾಂಗ್ರೆಸ್ ಆಯೋಗಕ್ಕೆ ದೂರು ನೀಡಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಎಸ್.ಉಗ್ರಪ್ಪ, ರಾಜ್ಯದಲ್ಲಿ ತೀವ್ರವಾದ ಬರವಿದೆ. ಕೇಂದ್ರ ಸಮಿತಿ ಕಳೆದ ಅಕ್ಟೋಬರ್ ನಲ್ಲಿ ಭೇಟಿ ನೀಡಿದ್ದರು. ಇಲ್ಲಿಯವರೆಗೆ ಕೇಂದ್ರ ಹೇಳಿಕೆ ಬಿಟ್ಟರೆ ಪರಿಹಾರ ಕೊಟ್ಟಿಲ್ಲ. ಕಾನೂನುಬದ್ಧವಾಗಿ ಸಿಗಬೇಕಾದ ಪರಿಹಾರ ಕೊಟ್ಟಿಲ್ಲ ಎಂದರು.
ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ದಾವೆ ಹೂಡಿದೆ. ಈಗಾಗಲೇ ಸುಪ್ರೀಂ ಕೋರ್ಟ್ ಕೂಡ ಕಪಾಳ ಮೋಕ್ಷ ಮಾಡುವ ಕೆಲಸ ಮಾಡಿದೆ. ಇನ್ನು ಬರಪರಿಹಾರ, ಕುಡಿಯುವ ನೀರು, ಮೇವಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಚುನಾವಣೆ ಆಯೋಗ ಸ್ಪಷ್ಟನೆ ನೀಡಿದೆ ಎಂದು ನುಡಿದರು.
ಏನಿದು ದೂರು?: ಬರ ಪರಿಹಾರ ಕೊಡುವ ವಿಚಾರದಲ್ಲಿ ಚುನಾವಣಾ ಆಯೋಗದ ನೀತಿ ಸಂಹಿತೆ ಅಡ್ಡಿಯಾಗಿದೆ. ಬರ ಪರಿಹಾರ ನೀಡಲು ಹೈಪವರ್ ಕಮಿಟಿ ಸಭೆ ನಡೆಯಬೇಕು. ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡಿಲ್ಲ. ಈ ಬಗ್ಗೆ ನಾವು ಪತ್ರ ಬರೆದಿದ್ದೇವೆ. ಆದರೆ ಚುನಾವಣಾ ಆಯೋಗ ಅನುಮತಿ ನೀಡಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಆದರೆ, ರಾಜ್ಯದಲ್ಲಿ ಕುಡಿಯುವ ನೀರು ಹಾಗೂ ಮೇವಿನ ಸಮಸ್ಯೆ ಇದೆ. ಕಾನೂನಿನಲ್ಲಿ ಬರ ಪರಿಹಾರ ಕೊಡುವ ಅವಕಾಶ ಇದ್ದರೂ ಸಹ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಮೇಲೆ ನೆಪ ಹೇಳುತ್ತಿದೆ. ಹೀಗಾಗಿ ಹೈಪವರ್ ಕಮಿಟಿ ಮೀಟಿಂಗ್ ಮಾಡಲು ಚುನಾವಣಾ ಆಯೋಗ ನಿರ್ದೇಶನ ನೀಡಬೇಕು. ಅಲ್ಲದೇ ತಕ್ಷಣವೇ ಬರ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಉಲ್ಲೇಖಿಸಿದೆ.