ಮಿಸ್ಟರ್ ಮೋದಿಯವರೇ ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು? ಜನಕ್ಕೆ ಉತ್ತರಿಸಿ- ಸಿಎಂ ಆಗ್ರಹ
ಚಿತ್ರದುರ್ಗ, ಏ 04: ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ? ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು. ಅದು ಕಪ್ಪು ಹಣ ಅಲ್ಲವೇ ದೇಶದ ಜನಕ್ಕೆ ಉತ್ತರಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದರು.
ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಅವರ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿ,ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡ್ತೀವಿ ಅಂದ್ರಲ್ಲಾ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ? ಮಾಡಿದ್ರಾ ಮೋದಿಯವರೇ?
ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಮಿಸ್ಟರ್ ಮೋದಿ?ನಿಮ್ಮ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡಬೇಕು ಎನ್ನುವ ಕಾರಣದಿಂದ ಐದು ಗ್ಯಾರಂಟಿ ಜಾರಿ ಮಾಡಿದೆವು. ಈ ದೇಶದ ಶೇ 95 ರಷ್ಟು ಬಹುಸಂಖ್ಯಾತ ಜನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿರುವುದು ನಮ್ಮ ಸಂವಿಧಾನ. ಈ ಸಂವಿಧಾನವನ್ನು ಬದಲಾಯಿಸುತ್ತೀವಿ ಎನ್ನುವುದು ಬಿಜೆಪಿಯ ಅಜೆಂಡಾ. ಇದನ್ನು ಬಿಜೆಪಿ ಕೇಂದ್ರ ಸಚಿವರಾಗಿದ್ದವರೇ ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಜಾರಿಗೆ ತರಲು ಅವಕಾಶ ಕೊಡಬೇಡಿ ಎಂದರು.
ಅಧಿಕಾರದಲ್ಲಿದ್ದಾಗ ಹಣ ಲೂಟಿ ಮಾಡೋದು, ಆಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ಅವರ ಅವಕಾಶ. ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಕಾರಜೋಳ ಅವರು ಇಲ್ಲಿಯವರಲ್ಲ. ಕಾಂಗ್ರೆಸ್ ಚಂದ್ರಪ್ಪ ಅವರು ಸೋತಾಗಲೂ ಜನರ ನಡುವೆ ಇದ್ದು ತಪಸ್ಸಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ಸಮಾಜ ಕಲ್ಯಾಣ ಸಚಿವರಾಗಿ ಕಾರಜೋಳ ಅವರು ಹಿಂದುಳಿದವರು, ದಲಿತರು, ಶ್ರಮಿಕರು, ದುಡಿಯುವ ವರ್ಗಗಳಿಗೆ ಏನೇನೂ ಮಾಡಿಲ್ಲ. ಕಾರಜೋಳ ಅವರ ಬಳಿ ಸಿಕ್ಕಾಪಟ್ಟೆ ಹಣ ಇರಬಹುದು. ಆದರೆ ಚಂದ್ರಪ್ಪ ಅವರಲ್ಲಿ ಜನಸೇವೆ ಮಾಡುವ ಸಜ್ಜನಿಕೆ, ಕಾಳಜಿ ಇದೆ. ಆದ್ದರಿಂದ ಚಿತ್ರದುರ್ಗದ ಜನತೆ ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಒಕ್ಕೋರಲಿನಿಂದ ಹೇಳಬೇಕು ಎಂದು ಕರೆ ನೀಡಿದರು.ಇವತ್ತಿನವರೆಗೂ ಬಿಜೆಪಿ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಎರಡೂ ಬಾರಿ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ವಾಮ ಮಾರ್ಗದ ಬಿಜೆಪಿಗೆ ನಾಡಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಹಸಿ ಸುಳ್ಳುಗಾರ ಅಮಿತ್ ಶಾ: RSS ನಲ್ಲಿ ಈ BJP ಯವರಿಗೆ ಸುಳ್ಳು ಹೇಳುವ ತರಬೇತಿ ಕೊಡ್ತಾರೆ. ಸುಳ್ಳಿನ ಮೇಲೆ ಸುಳ್ಳು ಹೇಳಿಕೊಂಡು ತಿರುಗ್ತಾ ಇದಾರೆ. ರಾಜ್ಯದ ಜನರ ಪಾಲಿನ ಬರಗಾಲದ ಹಣ ಏಕೆ ವಾಪಾಸ್ ಕೊಡಲಿಲ್ಲ ಎಂದು ನಾಡಿನ ಜನತೆ ಪ್ರಶ್ನೆ ಕೇಳಿದ್ರು. ಆದರೆ ರಾಜ್ಯ ಸರ್ಕಾರ 3 ತಿಂಗಳು ಲೇಟಾಗಿ ಮನವಿ ಮಾಡಿದ್ದಾಗಿ ಅಮಿತ್ ಶಾ ಭಯಾನಕ ಹಸಿ ಸುಳ್ಳು ಹೇಳಿದರು.ಬಡವರ ರಕ್ತ ಕುಡಿಯುತ್ತಾ ನಾಚಿಕೆ, ಮಾನ, ಮರ್ಯಾದೆ ಇಲ್ಲ ಇವರಿಗೆ. ಇಷ್ಟು ಭೀಕರ ಬರಗಾಲ ಬಂದಿದ್ದರೂ ಒಂದೇ ಒಂದು ರೂಪಾಯಿ ರಾಜ್ಯದ ಪಾಲಿನ ಹಣ ಕೊಡದೆ ಸುಳ್ಳು ಹೇಳಿಕೊಂಡು ತಿರುಗ್ತೀರಲ್ಲಾ, ನಾಚಿಕೆ ಇಲ್ವಾ ಇವರಿಗೆ ಎಂದು ಖಾರವಾಗಿ ಪ್ರಶ್ನಿಸಿದರು.