10 ವರ್ಷಗಳಿಂದ ಪ್ರಧಾನಿ ಮೋದಿ ಬರೀ ಸುಳ್ಳುಗಳನ್ನೇ ಹೇಳಿ ಆಡಳಿತ ನಡೆಸಿದ್ದಾರೆ: ದಿನೇಶ್‌ ಗುಂಡೂರಾವ್

ಬೆಂಗಳೂರು: ಮೋದಿ ಪ್ರಧಾನಿಯಾದಾಗಿನಿಂದ ದೇಶದಲ್ಲಿ ಬೆಲೆಯೇರಿಕೆ, ನಿರುದ್ಯೋಗ ಹೆಚ್ಚಾಗುತ್ತಲೇ ಇದೆ. 10 ವರ್ಷಗಳಿಂದ ದೇಶದ ಜನರಿಗೆ ಬರೀ ಸುಳ್ಳುಗಳನ್ನು ಹೇಳಿಕೊಂಡು ಆಡಳಿತ ನಡೆಸಿದ್ದಾರೆ. ದೇಶದ ಸಾಮಾನ್ಯ ಜನರಿಗೆ ಮೋದಿ ಏನು ಮಾಡಿದ್ದಾರೆ? ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಪ್ರಶ್ನಿಸಿದ್ದಾರೆ.

ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್‌ ಮಾಡಿರುವ ಅವರು, ನಮ್ಮ ರಾಜ್ಯದ ಬಳಿಕ ಈಗ ತಮಿಳುನಾಡು ನೆರೆ ಪರಿಹಾರ ನೀಡುವಂತೆ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ‌. ಕೇಂದ್ರ ಸರ್ಕಾರ ಕೇವಲ ಕರ್ನಾಟಕ ಮಾತ್ರವಲ್ಲ, ದಕ್ಷಿಣದ ರಾಜ್ಯಗಳನ್ನು ಅಸಡ್ಡೆ ಹಾಗೂ ತಾತ್ಸಾರದಿಂದ ನೋಡುತ್ತಿರುವುದಕ್ಕೆ ಉತ್ತಮ ಉದಾಹರಣೆಯಿದು. ಪ್ರಾಕೃತಿಕ ವಿಕೋಪದಿಂದ ಸಂಭವಿಸುವ ನಷ್ಟಕ್ಕೆ ಪರಿಹಾರ ನೀಡುವುದು ಕೇಂದ್ರದ ಕರ್ತವ್ಯ.NDRF ನಿಯಮಗಳ ಅನುಸಾರ ಕೇಂದ್ರ ನಷ್ಟ ಪೀಡಿತ ರಾಜ್ಯಗಳಿಗೆ ಪರಿಹಾರ ಒದಗಿಸಬೇಕು. ಆದರೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿಯ ಪ್ರಾತಿನಿಧ್ಯ ಇಲ್ಲ ಎಂಬ ಕಾರಣಕ್ಕಾಗಿ ಮೋದಿ ಸರ್ಕಾರ ತಾರತಮ್ಯ ಎಸಗುತ್ತಿದೆ. ಇದು ಸರಿಯಲ್ಲ ಎಂದು ಹೇಳಿದ್ದಾರೆ.

ದಕ್ಷಿಣದ ರಾಜ್ಯಗಳ ಬಗ್ಗೆ ಮಲತಾಯಿ‌ ಧೋರಣೆ ತೋರಿಸುತ್ತಿರುವ ಕೇಂದ್ರದ ನಡೆ ಒಕ್ಕೂಟ ವ್ಯವಸ್ಥೆಗೆ ಮಾರಕ. ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳಿಂದ ಕೇವಲ ಆದಾಯ ಬಯಸಿದರೆ ಸಾಲದು. ನಾವು ಕೇಂದ್ರಕ್ಕೆ ಕೊಟ್ಟ ಆದಾಯಕ್ಕೆ ಪ್ರತಿಫಲವಾಗಿ ಅನುದಾನ ಕೇಳುವುದು ನಮ್ಮ ಹಕ್ಕು. ಅದೇ ರೀತಿ ಅನುದಾನ-ಪರಿಹಾರ ಕೊಡುವುದು ಕೂಡ ಕೇಂದ್ರ ಸರ್ಕಾರದ ಜವಬ್ದಾರಿ. ರಾಜಕೀಯ ಕಾರಣಗಳಿಂದ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಿದರೆ ಅದರ ಪರಿಣಾಮವನ್ನು ಕೇಂದ್ರದ ಬಿಜೆಪಿ ಸರ್ಕಾರ ಎದುರಿಸಲೇಬೇಕಾಗುತ್ತದೆ ಎಂದು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುಳ್ಳು ಬಿಜೆಪಿಯವರ ಮನೆ ದೇವ್ರು. ಬಿಜೆಪಿ ನಾಯಕರು ಬಾಯಿಬಿಟ್ಟರೆ ಸಾಕು ಬರೀ ಸುಳ್ಳು. ಬಿಜೆಪಿಯ ಸುಳ್ಳು ಗ್ಯಾರಂಟಿಗಳಿಗೆ ಬೆಲೆ ಇಲ್ಲ. ಬಿಜೆಪಿಯ ಜುಮ್ಲಾಗಳಿಗೆ ಈ ಬಾರಿಯ ಚುನಾವಣೆಯಲ್ಲಿ ಮತದಾರರು ತಕ್ಕ ಉತ್ತರ ನೀಡುತ್ತಾರೆ. ಬರದಿಂದ ಕಂಗೆಟ್ಟಿರುವ ಕರ್ನಾಟಕದ ಕಷ್ಟಕ್ಕೆ ಸ್ಪಂದಿಸದ ಅಮಿತ್‌ ಶಾ ರಾಜ್ಯಕ್ಕೆ ಬಂದು ಬರೀ ಸುಳ್ಳುಗಳನ್ನು ಹೇಳಿ ಹೋಗಿದ್ದಾರೆ. ಕನ್ನಡಿಗರು ಅಮಿತ್‌ ಶಾ ಸುಳ್ಳನ್ನು ನಂಬುವಷ್ಟು ಮೂರ್ಖರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!