ಸಹಕಾರ ಸಂಘಗಳಿಗೆ ಸರ್ಕಾರ ನೀಡಿದ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ರಾಜ್ಯದ ಕೃಷಿಯೇತರ ಪತ್ತಿನ ಸಹಕಾರ ಸಂಘಗಳು ಹಾಗೂ ವಿವಿದೋದ್ಧೇಶ ಸಹಕಾರ ಸಂಘಗಳು ಸ್ವೀಕರಿಸುವ ಠೇವಣಿಗಳ ಮೇಲೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ತನ್ನ ವಿವಿಧ ಅವಧಿಯ ಠೇವಣಿಗಳ ಮೇಲೆ ನಿಗದಿಪಡಿಸಿದ ಠೇವಣಿ ಬಡ್ಡಿ ದರದಕ್ಕಿಂತ ಶೇ. 2ಕ್ಕೂ ಮೀರಿದ ಬಡ್ಡಿ ದರಗಳನ್ನು ನೀಡಕೂಡದು, ಅಂತೆಯೇ ಈ ಸಹಕಾರ ಸಂಘಗಳು ವಿತರಿಸುವ ಯಾವುದೇ ಸಾಲಗಳಿಗೆ ಗರಿಷ್ಠ ಶೇ. 12ಕ್ಕಿಂತ ಹೆಚ್ಚಿನ ಬಡ್ಡಿ ದರಗಳನ್ನು ನಿಗದಿಪಡಿಸುವಂತಿಲ್ಲ, ಸಹಕಾರ ಸಂಸ್ಥೆಗಳು ತಮ್ಮ ಹೆಚ್ಚುವರಿ ಠೇವಣಿಗಳನ್ನು ಕೇವಲ ಡಿ.ಸಿ.ಸಿ. ಬ್ಯಾಂಕ್ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಮಾತ್ರವೇ ಕಡ್ಡಾಯವಾಗಿ ತೊಡಗಿಸತಕ್ಕದ್ದು ಎಂಬ ಸೂಚನೆಗಳನ್ನು ದಿ. 01.04.2024 ರಿಂದ ಜಾರಿಗೆ ಬರುವಂತೆ ಪಾಲಿಸಬೇಕು ಎಂದು ಸರ್ಕಾರವು ಕಾಯ್ದೆ ಕಲಂ 30-ಬಿ ಯಡಿ ದಿ. 16.03.2024ರಂದು ನೀಡಿದ ಆದೇಶದ ವಿರುದ್ಧ ಉಡುಪಿ ಜಿಲ್ಲೆಯ ಸುಮಾರು ನೂರಕ್ಕೂ ಮಿಕ್ಕಿದ ಸಹಕಾರ ಸಂಘಗಳು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನೇತೃತ್ವದಲ್ಲಿ ಮಾನ್ಯ ಕರ್ನಾಟಕದ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದ್ದವು. ಸರ್ಕಾರವು ಸಹಕಾರ ಸಂಘಗಳ ಠೇವಣಿ- ಸಾಲಗಳಿಗೆ ಸಹಕಾರ ಬ್ಯಾಂಕ್ ‘ಯಾ’ ಡಿ.ಸಿ.ಸಿ. ಬ್ಯಾಂಕ್ ಮಾದರಿಯನ್ನು ಅಳವಡಿಸದೇ ಭಾರತೀಯ ಸ್ಟೇಟ್ ಬ್ಯಾಂಕ್ ಮಾದರಿಯನ್ನು ಅಳವಡಿಸಲು ಹೊರಟಿರುವುದು ಅವೈಜ್ಞಾನಿಕ ಹಾಗೂ ಇದು ಸಹಕಾರ ಸಂಘಗಳ ಕಾರ್ಯಾಚರಣೆ ಹಾಗೂ ಅಭಿವೃದ್ಧಿಗೆ ಮಾರಕ, ಪತ್ತಿನ ರಚನಾ ವ್ಯವಸ್ಥೆಯ ಸಹಕಾರ ಸಂಘಗಳಿಗೆ ಸರ್ಕಾರವು ಕಾಯ್ದೆ ಕಲಂ 30-ಬಿ ಯಡಿ ನಿರ್ದೇಶನವನ್ನು ನೀಡಲು ಬರುವುದಿಲ್ಲವೆಂದು ಮುಖ್ಯವಾಗಿ ಸಹಕಾರ ಸಂಘಗಳ ವಾದವಾಗಿತ್ತು. ಸಹಕಾರ ಸಂಘಗಳ ಈ ವಾದವನ್ನು ಪುರಸ್ಕರಿಸಿದ ಮಾನ್ಯ ಉಚ್ಛ ನ್ಯಾಯಾಲಯವು ಸರ್ಕಾರವು ಹೊರಡಿಸಿದ ದಿ. 16.03.2024ರ ಆದೇಶಕ್ಕೆ ಇಂದು ತಡೆಯಾಜ್ಞೆಯನ್ನು ನೀಡಿರುತ್ತದೆ ಎಂದು ಜಿಲ್ಲಾ ಸಹಕಾರ ಯೂನಿಯನ್ನಿನ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!