ದೇಶಕ್ಕೆ ಘರ್ ಘರ್ ಗ್ಯಾರಂಟಿ- ಏ.5ರಂದು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ
ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಗ್ಯಾರಂಟಿಗಳ ಮೂಲಕ ಕಮಾಲ್ ಮಾಡಿದ್ದ ಕಾಂಗ್ರೆಸ್; ಈಗ ಲೋಕಸಭೆ ಚುನಾವಣೆಯಲ್ಲೂ ಗ್ಯಾರಂಟಿಗಳ ಮೂಲಕವೇ ಮತದಾರರಿಗೆ ಗಾಳ ಹಾಕಲು ಮುಂದಾಗಿದೆ. ರವಿವಾರ ಪಂಚನ್ಯಾಯ ಗ್ಯಾರಂಟಿಗಳ ಖಾತರಿ ನೀಡಲಿರುವ “ಘರ್ ಘರ್ ಗ್ಯಾರಂಟಿ’ ಎಂಬ ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿದೆ.
ದಿಲ್ಲಿಯ ಲೋಕಸಭೆ ಕ್ಷೇತ್ರ ಉಸ್ಮಾನ್ಪುರ್, ಕೈಥವಾಡಾದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ “ಘರ್ ಘರ್ ಗ್ಯಾರಂಟಿ’ಗೆ ಚಾಲನೆ ನೀಡಿ, ಗ್ಯಾರಂಟಿ ಕಾರ್ಡ್ಗಳನ್ನು ವಿತರಿಸಿದ್ದಾರೆ. ಈ ವೇಳೆ ಮಾತನಾಡಿ, ನಮ್ಮ “ಪಂಚನ್ಯಾಯ -ಪಚ್ಚೀಸ್ ಗ್ಯಾರಂಟಿ’ (ಐದು ನ್ಯಾಯ – ಇಪ್ಪತ್ತೈದು ಗ್ಯಾರಂಟಿ) ಯನ್ನು ಪ್ರತಿಯೊಬ್ಬ ದೇಶವಾಸಿಗಳಿಗೆ ತಲುಪಿಸಲು ಘರ್ ಘರ್ ಗ್ಯಾರಂಟಿ ಉಪ ಕ್ರಮವನ್ನು ಆರಂಭಿಸುತ್ತಿ ದ್ದೇವೆ. ನಮ್ಮ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಘೋಷಿಸಿರುವ ಗ್ಯಾರಂಟಿಗಳನ್ನೆಲ್ಲ ಈಡೇರಿಸುತ್ತೇವೆ ಎಂದು ಜನರಿಗೆ ಖಾತರಿ ನೀಡುವುದಕ್ಕಾಗಿ ಈ ಗ್ಯಾರಂಟಿ ಕಾರ್ಡ್ ಬಿಡುಗಡೆ ಮಾಡುತ್ತಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ನ ಪ್ರಣಾಳಿಕೆಯನ್ನು ಶುಕ್ರವಾರ ದಿಲ್ಲಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಮೋದಿ ಗ್ಯಾರಂಟಿ ರೀತಿ ಅಲ್ಲ: ಖರ್ಗೆ
ನಮ್ಮ ಗ್ಯಾರಂಟಿಗಳು ನರೇಂದ್ರ ಮೋದಿ ತಮ್ಮ ಹೆಸರಿನಲ್ಲೇ ನೀಡುತ್ತಿರುವ “ಮೋದಿ ಕೀ ಗ್ಯಾರಂಟಿ’ ಯಂಥದ್ದಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿ ದ್ದಾರೆ. “ಪ್ರಧಾನಿಯವರು ಗ್ಯಾರಂಟಿ ಬಗ್ಗೆ ಮಾತನಾಡುತ್ತಾರೆ ಹೊರತು ಎಂದಿಗೂ ಅವರ ಗ್ಯಾರಂಟಿಗಳು ಜನರನ್ನು ತಲುಪುವುದಿಲ್ಲ. ಆದರೆ ನಾವು ನೀಡುತ್ತಿರುವುದು ನಮ್ಮ ಸರಕಾರ ಯಾವಾಗಲೂ ಜನರಿಗಾಗಿ ಕೆಲಸ ಮಾಡಿದೆ, ಮಾಡುತ್ತಿದೆ ಮತ್ತು ಮಾಡ ಲಿದೆ ಎಂಬುದರ ಗ್ಯಾರಂಟಿ’ ಎಂದರು.
ಏನಿದು ಘರ್ ಘರ್ ಗ್ಯಾರಂಟಿ ?
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗಲೇ ಪಂಚ ನ್ಯಾಯ ಗ್ಯಾರಂಟಿಗಳನ್ನು ಘೋಷಿಸಿದೆ. ಯುವ ನ್ಯಾಯ, ನಾರಿ ನ್ಯಾಯ, ಕಿಸಾನ್ ನ್ಯಾಯ, ಶ್ರಮಿಕ್ ನ್ಯಾಯ ಹಾಗೂ ಹಿಸ್ಸೇದಾರಿ ನ್ಯಾಯ ಎಂಬ ಐದು ನ್ಯಾಯಗಳನ್ನು ಘೋಷಿಸಿದೆ. ಅದರನ್ವಯ ಪ್ರತಿ ನ್ಯಾಯಕ್ಕೂ ಸಂಬಂಧಿಸಿ ತಲಾ ಐದು ಗ್ಯಾರಂಟಿಗಳನ್ನು ಘೋಷಿಸಿದೆ. ಆ 25 ಗ್ಯಾರಂಟಿಗಳನ್ನೂ ನಮೂದಿಸಿರುವ ಮತ್ತು ಐಎನ್ಡಿಐಎ ಮೈತ್ರಿ ಒಕ್ಕೂಟ ಅಧಿಕಾರಕ್ಕೆ ಬಂದರೆ ಅವೆಲ್ಲ ವನ್ನೂ ಈಡೇರಿಸುತ್ತೇವೆ ಎಂಬ ಭರವಸೆಯ ಕರಪತ್ರಗಳನ್ನು ಜನರಿಗೆ ಹಂಚುವ ಅಭಿ ಯಾನವೇ ಘರ್ ಘರ್ ಗ್ಯಾರಂಟಿ.
ಪಂಚನ್ಯಾಯ ಗ್ಯಾರಂಟಿಗಳು
1. ಯುವ ನ್ಯಾಯ: ಯುವಕರಿಗೆ ಉದ್ಯೋಗ ಖಾತ್ರಿ, ನೇಮಕಾತಿ ಭದ್ರತೆ, ಪ್ರಶ್ನೆಪತ್ರಿಕೆ ಸೋರಿಕೆಗೆ ಕಡಿವಾಣ, ಫ್ರೀಲ್ಯಾನ್ಸರ್ಗಳಿಗೂ ರಕ್ಷಣೆ.
2.ನಾರಿ ನ್ಯಾಯ: ಬಡ ಮಹಿಳೆಯರಿಗೆ ವಾರ್ಷಿಕ 1ಲಕ್ಷ ರೂ., ಕೇಂದ್ರದ ನೌಕರಿಯಲ್ಲಿ ಶೇ.50 ಮೀಸಲು, ಆಶಾ-ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ.
3.ರೈತ ನ್ಯಾಯ: ಎಂಎಸ್ಪಿಗೆ ಕಾನೂನು ಭದ್ರತೆ, ಕೃಷಿ ಸಾಲ ಮನ್ನಾಕ್ಕೆ ಆಯೋಗ, ಬೆಳೆವಿಮೆ ಯೋಜನೆಯ ಮರು ವಿನ್ಯಾಸ, ಕೃಷಿ ಸಂಬಂಧಿ ವಸ್ತುಗಳಿಗೆ ಜಿಎಸ್ಟಿ ವಿನಾಯಿತಿ.
4. ಶ್ರಮಿಕ ನ್ಯಾಯ: ದಿನಗೂಲಿ 400 ರೂ.ಗೆ ಏರಿಕೆ, 25 ಲಕ್ಷ ರೂ.ವರೆಗೆ ಆರೋಗ್ಯ ವಿಮೆ, ನಗರಕ್ಕೂ ನರೇಗಾದಂಥ ಯೋಜನೆ, ಅಸಂಘಟಿತ ಕಾರ್ಮಿಕರಿಗೂ ಅಪಘಾತ ವಿಮೆ.
5.ಹಿಸ್ಸೇದಾರಿ ನ್ಯಾಯ: ಸಮಾನ ಆರ್ಥಿಕ ನ್ಯಾಯ, ಎಸ್ಸಿ, ಎಸ್ಟಿ, ಒಬಿಸಿಗೆ ಮೀಸಲು ಹೆಚ್ಚಳ, ಬುಡಕಟ್ಟು ಪ್ರದೇಶಗಳಿಗೆ ಪಂಚಾಯತ್ರಾಜ್.ನಮ್ಮ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಜಾರಿ ಮಾಡಲಿರುವ ಗ್ಯಾರಂಟಿಯನ್ನು ಘೋಷಿಸಿದ್ದೇವೆ. ಪ್ರಧಾನಿ ಮೋದಿಯವರು ಅವರ ಗ್ಯಾರಂಟಿ ಬಗ್ಗೆ ಘೋಷಿಸುತ್ತಾರೆ. ಅದರೆ ಜನರಿಗೆ ಅದು ಸಿಗುವುದರ ಬಗ್ಗೆ ಖಾತರಿ ಇಲ್ಲ
-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ